Category Archives: ಲೇಖನಗಳು

ಡೆಕ್ಕನ್ ಕ್ರೋನಿಕಲ್ ಪತ್ರಿಕೆಯಲ್ಲಿ ಮೂಡಿ ಬಂದಿರುವ ಬರಹ.

ಮಾರ್ಚ್ 12ರ ಡೆಕ್ಕನ್ ಕ್ರೋನಿಕಲ್ ಪತ್ರಿಕೆಯಲ್ಲಿ ಮೆಟ್ರೋನವರ ಹುಳುಕು ಭಾಷಾ ನೀತಿ ಮತ್ತು ಹಿಂದಿ ಭಾಷಿಕರನ್ನೇ ಕೆಲಸಕ್ಕೆ ನೇಮಿಸಿಕೊಂಡಿರುವುದರ ಬಗ್ಗೆ ಮೂಡಿ ಬಂದಿರುವ ಬರಹ.

dc

Advertisements

ಮೆಟ್ರೋ ಎಡವಟ್ಟು::

ಮಾರ್ಚ್ 12ರ ಉದಯವಾಣಿ ಪತ್ರಿಕೆಯಲ್ಲಿ ಮೆಟ್ರೋನವರ ಹುಳುಕು ಭಾಷಾ ನೀತಿಯ ಬಗ್ಗೆ ಮೂಡಿ ಬಂದಿರುವ ಬರಹ.

metro_edavattu

ಹಿಂದಿ ಹಾವಳಿ – ಉದಯವಾಣಿ

ಮಾರ್ಚ್ 11ರ ಉದಯವಾಣಿ ಪತ್ರಿಕೆಯಲ್ಲಿ ಮೆಟ್ರೋನವರ ಹುಳುಕು ಭಾಷಾ ನೀತಿಯ ಬಗ್ಗೆ ಮೂಡಿ ಬಂದಿರುವ ಬರಹ.

ashok_on_grahaka_koota

ದೆಹಲಿ, ಚೆನ್ನೈ ಮೆಟ್ರೊಗೂ ಬೆಂಗಳೂರಿನ ನಮ್ಮ ಮೆಟ್ರೊಗೂ ಏನ್ ವ್ಯತ್ಯಾಸ ಗೊತ್ತಾ? ..

(ದೆಹಲಿಯ ಮೆಟ್ರೋದಲ್ಲಿ ಭಾಷಾ ಆಯ್ಕೆ ಹಿಂದೀ/ ಇಂಗ್ಲೀಷ್)
ನಮ್ಮ ಮೆಟ್ರೋ ಮಿಂಬಲೆಗೆ ಯಾವಾಗಾದ್ರೂ ಭೇಟಿ ನೀಡಿದ್ದೀರಾ? ಅದಕ್ಕಿಂತ ಮೊದಲು ಭಾರತದ ರಾಜಧಾನಿ ದೆಹಲಿಯ ಮೆಟ್ರೋ ಮಿಂಬಲೆಯನ್ನು ತೆರೆದು ನೋಡಿ. ಇದರ ಮುಖಪುಟ ಇಂಗ್ಲೀಷಿನಲ್ಲಿ ತೆರೆದುಕೊಳ್ಳುತ್ತದೆ. ದೆಹಲಿ ಮೆಟ್ರೋದ ಹೆಸರು “ದೆಹಲಿ ಮೆಟ್ರೋ” ಅಂತಾ. ಇದರ ಮಿಂಬಲೆಯಲ್ಲಿ ಹಿಂದೀ ಭಾಷೆಯ ಆಯ್ಕೆಯೂ ಇದೆ. ದೆಹಲಿ ಮೆಟ್ರೋದ ಅಧಿಕಾರಿಗಳ ಈ ಪಟ್ಟಿಯನ್ನೊಮ್ಮೆ ನೋಡಿ ಬಿಡಿ. ಎಷ್ಟು ಜನ ಹಿಂದೀ ಅಧಿಕಾರಿಗಳಿದ್ದಾರೆ ಅಂತಾ ಹಾಗೇ ಲೆಕ್ಕ ಹಾಕ್ಕೊಂಡ್ಬುಡಿ.
ಈಗ ಇಲ್ಲಿ ಬನ್ನಿ… ಇನ್ನೂ ಯೋಜನಾ ಹಂತದಲ್ಲಿರೋ ಚೆನ್ನೈ ಮೆಟ್ರೋ ಮಿಂಬಲೆಯನ್ನು ಈಗ ತೆರೆಯೋಣ.
(ಚೆನ್ನೈ ಮೆಟ್ರೋದಲ್ಲಿ ಭಾಷಾ ಆಯ್ಕೆ ಇಂಗ್ಲೀಷ್/ ತಮಿಳು)
ಚೆನ್ನೈ ಮೆಟ್ರೋದ ಹೆಸರು “ಚೆನ್ನೈ ಮೆಟ್ರೋ ರೈಲ್” ಅಂತಾ. ಇದರ ಮಿಂಬಲೆ ತೆರೆದು ಕೊಳ್ಳುವುದು ಇಂಗ್ಲೀಷಿನಲ್ಲೇ… ಇದರಲ್ಲಿ ತಮಿಳು ಭಾಷೆಯ ಆಯ್ಕೆಯ ಅವಕಾಶವೂ ಇದೆ. ಇದರ ಅಧಿಕಾರಿಗಳ ಪಟ್ಟಿಯನ್ನೂ ನೋಡಿ. ಇದರಲ್ಲಿ ಎಷ್ಟು ಜನ ತಮಿಳು ಭಾಷಿಕರಿದ್ದಾರೆ ಅನ್ನೋದನ್ನೊಂದು ಸಲ ಗುರುತಿಟ್ಟುಕೊಂಡುಬಿಡಿ.
ಈಗ ಬನ್ನಿ, ಬೆಂಗಳೂರಿನ ನಮ್ಮ ಮೆಟ್ರೋ ಮಿಂಬಲೆಗೆ. ಏನು ಕಾಣುಸ್ತಿದೆ? ಇಂಗ್ಲೀಷಿನ ಮುಖಪುಟವಾ? ದಿಲ್ಲೀಲೂ ಚೆನ್ನೈಲೂ ಅದೇ ಕಾಣೋದಲ್ವಾ? ಮತ್ತೇನು ಹುಡುಕ್ತಿದೀರಾ? ಭಾಷಾ ಆಯ್ಕೆ? ಕನ್ನಡ ಇಲ್ಲಾ ಅಂತಾ ಬೇಸರಾನಾ? ಸ್ವಾಮಿ ಹಾಗೆಲ್ಲಾ ಹುಡುಕಕ್ಕೆ ಹೋಗಿ ಬೇಸರವಾಗಿ ನಮ್ಮ ಮೆಟ್ರೋ ಅಧಿಕಾರಿಗಳಿಗೆ ಪತ್ರ ಗಿತ್ರಾ ಬರೆದೀರಾ ಜೋಕೆ!
(ಬೆಂಗಳೂರಿನ ನಮ್ಮ ಮೆಟ್ರೋಲಿ ಭಾಷಾ ಆಯ್ಕೆಯೇ ಇಲ್ಲ…)
ಅದರ ಮುಖ್ಯಸ್ಥರೇ ನಿಮಗೆ ಖುದ್ದಾಗಿ ಉತ್ತರ ಬರೆದು “ಕನ್ನಡಿಗರು ಸಹನಶೀಲರು. ದಯವಿಟ್ಟು ನೀವು ಸಹಿಷ್ಣುತೆಯನ್ನು ಬೆಳೆಸಿಕೊಳ್ಳಬೇಕು. ಈ ರೀತಿಯ ಭಾಷಾ ದುರಭಿಮಾನ ಸಲ್ಲದು. ಈ ತಾಣಕ್ಕೆ ಪರಭಾಷಿಕರು ಬರುತ್ತಾರೆ ಹಾಗಾಗಿ ಇಂಗ್ಲೀಷು ಹಾಕಿದ್ದೀವಿ..ನೀವು ಹೀಗೆ ಆಕ್ಷೇಪಿಸುವುದು ನಿಮ್ಮ ಪರಭಾಷಾ ದ್ವೇಷದ ಮನಸ್ಥಿತಿ ತೋರಿಸುತ್ತದೆ…” ಎಂದಾರು!
ನಮ್ಮ ಮೆಟ್ರೋಲಿ ಮಾತ್ರಾ ಯಾಕೆ ಕನ್ನಡ ಆಯ್ಕೆ ಇಲ್ಲಾ ಅಂತಾ ಯೋಚಿಸೋ ಮೊದಲು ಇದರ ಅಧಿಕಾರಿಗಳ ಹೆಸರಿನ ಪಟ್ಟಿಯನ್ನೊಮ್ಮೆ ನೋಡಿ. ಎಷ್ಟು ಜನ ಕನ್ನಡದವರಿದ್ದಾರೆ ಹುಡುಕ್ಕೊಳ್ಳಿ. ಏನು? ದುರ್ಬೀನು ಬೇಕಾ?
ಮೂಲ ಲೇಖನ-http://vasantabanda.blogspot.in/2011/11/dehali-chennai-metrogu-bengalurina.html

ನಮ್ಮ ಮೆಟ್ರೋ ನಿಜಕ್ಕೂ ನಮ್ಮದೇನಾ ?

ಯಾವುದೇ ಊರಿನ ಸಾರಿಗೆ ವ್ಯವಸ್ಥೆ ಒಂದು ರೀತಿಯಲ್ಲಿ ಆ ಊರಿನ ಮುಖವಾಣಿಯಂತೆ ಇರುತ್ತೆ. ಅಲ್ಲಿಗೆ ಬರುವ ಪ್ರಯಾಣಿಕನಿಗೆ, ಪ್ರವಾಸಿಗನಿಗೆ ಆ ಊರು, ಅಲ್ಲಿನ ಜನರ ಭಾಷೆ, ಅಲ್ಲಿನ ಜನ ಜೀವನ ಎಲ್ಲವನ್ನು ಒಂದು ರೀತಿಯಲ್ಲಿ ಪರಿಚಯಿಸುವ ಕನ್ನಡಿಯಾಗಿರುತ್ತೆ. ಬಿ.ಎಂ.ಟಿ.ಸಿಯ ನಂತರ ಈಗ ಬೆಂಗಳೂರಿನ ಸಾರಿಗೆ ಮೂಲಭೂತ ಸೌಕರ್ಯದ ಚಹರೆಯನ್ನೇ ಬದಲಾಯಿಸುವ ಹೊಸ ವ್ಯವಸ್ಥೆಯಾಗಿ ನಮ್ಮ ಮೆಟ್ರೋ ನಗರ ರೈಲು ಸಾರಿಗೆ ಕಳೆದ ಗುರುವಾರದಿಂದ ಶುರುವಾಗಿದೆ. ಹೆಚ್ಚು ಕಡಿಮೆ ೩೦ ವರ್ಷಗಳ ಕಾಲದಿಂದ ಇಂತಹದೊಂದು ವ್ಯವಸ್ಥೆಯ ಬಗ್ಗೆ ಹಲವಾರು ನಾಯಕರು, ಸರ್ಕಾರಗಳು, ನಟ ಶಂಕರ್ ನಾಗ್ ನಂತಹ ಕನಸುಗಾರ ಕನ್ನಡಿಗರು ಕಂಡ ಕನಸು ನನಸಾಗುವ ಮೊದಲ ಹಂತವಾಗಿ ಇದು ಬಂದಿದೆ. ತುಂಬಾ ಸಂತಸದ ವಿಚಾರವೇ ಸರಿ. ನಮ್ಮ ಮೆಟ್ರೋದಲ್ಲಿ ನಮ್ಮತನದ ಅಚ್ಚು ಒತ್ತಿರಬೇಕು ಎಂದುಕೊಂಡು ನೋಡಲು ಹೋದರೆ ಅಚ್ಚರಿ ಕಾದಿದೆ. ಅಲ್ಲಿನ ನಾಮ ಫಲಕ, ಘೋಷಣೆ, ಸುರಕ್ಷೆಯ ಸಂದೇಶ, ಹೀಗೆ ಎಲ್ಲ ವ್ಯವಸ್ಥೆಯಲ್ಲೂ ಯಾರದೋ ಒತ್ತಾಯಕ್ಕೆ ಸಿಲುಕಿಯೋ ಅಥವಾ ಯಾರನ್ನೋ ಒಲೈಸಲೋ ಎಂಬಂತೆ ಕನ್ನಡ, ಇಂಗ್ಲಿಶ್ ಜೊತೆ ಅನಾವಶ್ಯಕವಾಗಿ ಹಿಂದಿಯನ್ನೂ ಬಳಸಿರುವುದು ಕಂಡಾಗ ಹಿಂದಿ ಮೂಲಭೂತವಾದಿಗಳ ಕೈಗೆ ಹಿಂದಿ ಹೇರಿಕೆಯ ಹೊಸ ಅಸ್ತ್ರವಾಗಿ ನಮ್ಮ ಮೆಟ್ರೋ ಕಂಡಿದೆ ಅಂದರೆ ತಪ್ಪಾಗದು.

ಬೈಯಪ್ಪನ ಹಳ್ಳಿಯಿಂದ ಹಲಸೂರಿಗೆ ಹೋಗಲು ಹಿಂದಿ ಘೋಷಣೆ ಬೇಕೇ? 

ನಮ್ಮ ಮೆಟ್ರೋ ರೈಲಿನ ಎಲ್ಲ ಸೂಚನೆ, ನಾಮ ಫಲಕ, ನಿಲ್ದಾಣದ ಎಲ್ಲ ಕಡೆಯಲ್ಲೂ ತ್ರಿ ಭಾಷಾ ಸೂತ್ರ ಅನ್ನುವ ಪೊಳ್ಳು ನೆಪವೊಡ್ಡಿ ಹಿಂದಿ ಬಳಸಿರುವುದು ಯಾಕೆ? ಇಡೀ ಬೆಂಗಳೂರಿನ ಜೀವನಾಡಿಯಾಗಿರುವ  ಬಿ.ಎಂ.ಟಿ.ಸಿ ಕನ್ನಡವೊಂದನ್ನೇ ಬಳಸಿ ಎಲ್ಲ ಜನರನ್ನು ಅತ್ಯಂತ ಪರಿಣಾಮಕಾರಿಯಾಗಿ ತಲುಪುತ್ತಿರುವಾಗ ಇಲ್ಲಿ ಮಾತ್ರ ಬೈಯಪ್ಪನ ಹಳ್ಳಿಯಿಂದ ಹಲಸೂರಿಗೆ ಹೋಗಲು ಹಿಂದಿ ಘೋಷಣೆ ಬೇಕೇ?  ಕೇಂದ್ರ ಸರ್ಕಾರ ಈ ಯೋಜನೆಗೆ ಕೊಟ್ಟ ಹಣ ಕೇವಲ ೨೫%. ರಾಜ್ಯದ ಪಾಲು ೩೦% ಜೊತೆಗೆ ಮೆಟ್ರೋ ಆಸ್ತಿ-ಪಾಸ್ತಿಯನ್ನೇ ಆಧಾರವಾಗಿಟ್ಟುಕೊಂಡು ಪಡೆದ ಸಾಲ ಖಾಸಗಿ ಸಾಲ ೪೫% ಇದೆ. ಕೇಂದ್ರ ಕೊಟ್ಟಿರುವ ೨೫% ಹಣ ಕೂಡ ಅವರದ್ದಲ್ಲ. ಕರ್ನಾಟಕದಿಂದ ಕೇಂದ್ರಕ್ಕೆ ಹೋಗೋ ಸಾವಿರಾರು ಕೋಟಿಯ ತೆರಿಗೆ ಹಣದಲ್ಲಿ ನಮಗೆ ಮರಳಿ ಕೊಟ್ಟ ಪುಡಿಗಾಸಷ್ಟೇ. ಹೀಗಿರುವಾಗ ಕೊಟ್ಟಿರುವ ೨೫% ನಮ್ಮದೇ ಹಣಕ್ಕೆ ಎಲ್ಲೆಡೆ ಹಿಂದಿ ಬಳಸಬೇಕು ಎಂದು ಕೇಂದ್ರ ಅಂದರೆ ಅದು ಹಿಂದಿ ಹೇರಿಕೆಯಲ್ಲದೆ ಇನ್ನೇನು?  ಅಷ್ಟಕ್ಕೂ ಹಿಂದಿಯಲ್ಲೇ ಆಡಳಿತ ಮಾಡಬೇಕು ಅನ್ನಲು ಕೇಂದ್ರ ಸರ್ಕಾರ ಅನ್ನುವುದು ಕೇವಲ ಹಿಂದಿ ಭಾಷಿಕರ ಸರ್ಕಾರವೇ? ಭಾರತದ ೨೨ ಭಾಷೆಯವರು ಸೇರಿ ತಾನೇ ಕೇಂದ್ರ ಆಗಿರುವುದು? ಹಾಗಿದ್ದಾಗ ನಿಮ್ಮೂರಲ್ಲೇ ನಿಮ್ಮ ನಿಮ್ಮ ಭಾಷೆ ಏನಾದ್ರೂ ಮಾಡ್ಕೊಳ್ಳಿ ( ಮನೇಲಿ ಇದ್ರೆ ಒಳ್ಳೆಯದು ಅಂತ ಓದಿಕೊಳ್ಳಿ) ಹಿಂದಿ ಮಾತ್ರ ಬಳಸಲೇಬೇಕು ಅಂತ ಕೇಂದ್ರ ಹೇಳುವುದು ಹಿಂದಿಯೇತರ ನುಡಿಗಳ ಬಗ್ಗೆ ಅದಕ್ಕೆಷ್ಟು ಕಾಳಜಿ ಇದೆ ಅನ್ನುವ ಪ್ರಶ್ನೆ ಹುಟ್ಟಿಸುವುದಿಲ್ಲವೇ ? ಇರಲಿ ಕೇಂದ್ರ ತನ್ನ ವ್ಯಾಪ್ತಿಯಲ್ಲಿರುವ ಕಛೇರಿಗಳಲ್ಲಿ ಪ್ರಜಾತಂತ್ರ ವಿರೋಧಿಯಾಗಿ  ಹಿಂದಿ ಹೇರುವುದೇ ಗೊತ್ತೇ ಇದೆ, ಒಂದಲ್ಲ ಒಂದು ದಿನ ಅದು ಅಂತ್ಯ ಕಾಣಲು ಬೇಕು. ಆದ್ರೆ ಒಂದು ಊರಿನ ಸ್ಥಳೀಯ ಸಾರಿಗೆಯಲ್ಲೂ ಹಿಂದಿ ಹೇರಬೇಕು ಎಂದು ಅದು ಹೊರಟಿತ್ತೆ ಎಂದು ನೋಡಲು ಹೊರಟರೆ ಕಾಣುವುದು ಇನ್ನೂ ಅಚ್ಚರಿಯ ಸಂಗತಿ. ಅದೇನು ಗೊತ್ತೇ? ನಮ್ಮ ಮೆಟ್ರೋದಲ್ಲಿ ಕಡ್ಡಾಯವಾಗಿ ಹಿಂದಿ ಬಳಸಲೇಬೇಕು ಎಂದು ಕೇಂದ್ರ ಸರ್ಕಾರ ಹೇಳಿದೆಯೇ ಎಂದು ಮೆಟ್ರೋ ಎಂ.ಡಿ ಶ್ರೀ ಶೈಲಂ ಅವರಿಗೆ ಈ ಹಿಂದೆ ಗೆಳೆಯರೊಬ್ಬರು ಮಿಂಚೆ ಕಳಿಸಿ ಕೇಳಿದ್ದಾಗ ಅವರು ಕೊಟ್ಟ ಸ್ಪಷ್ಟ ಉತ್ತರ “ಇಲ್ಲ” ಅನ್ನುವುದಾಗಿತ್ತು. ಆ ಮಿಂಚೆಯಲ್ಲಿ ಏನಿತ್ತು ಎಂದು ಕೆಳಗೆ ನೋಡಿ:

ಯಾರ ಒತ್ತಾಯಕ್ಕೆ? ಯಾರನ್ನು ಓಲೈಸಲು?

ಹಾಗಿದ್ದಲ್ಲಿ ಇವತ್ತು ನಮ್ಮ ಮೆಟ್ರೋ ದಲ್ಲಿ ಎಲ್ಲ ಸೂಚನೆ, ಸುರಕ್ಷೆ, ಘೋಷಣೆಗಳಲ್ಲಿ ಹಿಂದಿ ಬಳಸುತ್ತಿರುವುದು ಯಾತಕ್ಕೆ? ಕನ್ನಡವೇ ಬಾರದ ರಕ್ಷಣಾ ಸಿಬ್ಬಂದಿ ಕಾಣಿಸಿಕೊಳ್ಳುತ್ತಿರುವುದು ಯಾಕೆ? ಯಾರ ಒತ್ತಾಯಕ್ಕೆ? ಯಾರನ್ನು ಓಲೈಸಲು?  ಇವತ್ತು ಮೊದಲ ಹಂತದಲ್ಲಿ ಮಾಡಿರುವ ಈ ಹೇರಿಕೆ ನಾಳೆ ಎಲ್ಲ ಹಂತದಲ್ಲೂ ಕಾಣುತ್ತೆ.. ಮುಂದೆ? ಬಿ.ಎಂ.ಟಿ.ಸಿ ಯಲ್ಲೂ ತ್ರಿಭಾಷ ಸೂತ್ರ? ಆಮೇಲೆ ಕೆಸ್ಸಾರ್ಟಿಸಿ ? ನಂತರ ಸಾರಿಗೆ ಇಲಾಖೆ? ಎಲ್ಲಿದೆ ಇದಕ್ಕೆ ಕೊನೆ? ಮೊದಲು  ಕನ್ನಡದ ಜೊತೆಗೆ ಹಿಂದಿ ಹಾಕ್ತಿವಿ ಅಂತಾರೆ, ಆಮೇಲೆ ಹಿಂದಿ ಕಲಿತಾಗಿದೆಯಲ್ಲ, ಇನ್ಯಾಕೆ ಕನ್ನಡ, ಸುಮ್ನೆ ದುಡ್ಡು ದಂಡ ಅಂತಾರೆ. ಅಲ್ಲಿಗೆ ಕನ್ನಡದ ತಿಥಿ. ಈ ರೀತಿಯ ನೂರೆಂಟು ವಲಸಿಗರಿಗಾಗಿನ  ಅನುಕೂಲಗಳು ಕರ್ನಾಟಕಕ್ಕೆ ಇನ್ನಷ್ಟು ಪರಭಾಷಿಕರ ವಲಸೆ ಹೆಚ್ಚಿಸಿ, ಸ್ಥಳೀಯ ಡೆಮಾಗ್ರಫಿಯನ್ನು ಬದಲಾಯಿಸಿ, ಅವರೆಂದು ಕನ್ನಡ ಕಲಿತು ಇಲ್ಲಿನ ಮುಖ್ಯವಾಹಿನಿಯಲ್ಲಿ ಬೆರೆಯದಂತೆ ಮಾಡಿ  ಸ್ಥಳೀಯರ ಜೀವನವನ್ನು ಇನ್ನಷ್ಟು ಅಸಹನೀಯ ಮಾಡಬಲ್ಲದೇ  ಹೊರತು ಇನ್ನಾವ ದೊಡ್ಡ ಲಾಭವು ನಮಗೆ ಸಿಗದು. ಈ ಹಿಂದಿ ಹೇರಿಕೆಯನ್ನು ನಾವೆಲ್ಲರೂ ವಿರೋಧಿಸಬೇಕು. ನಮ್ಮ ಮೆಟ್ರೋಗೆ ಹೋದಾಗಲೆಲ್ಲ ನಿಮ್ಮ ಅನಿಸಿಕೆ ಬರೆಯಿರಿ, ಮೆಟ್ರೋ ಅಧಿಕಾರಿಗಳಿಗೆ ಪತ್ರ, ಮಿಂಚೆ, ಕರೆಗಳ ಮೂಲಕ ಈ ಮೂರ್ಖತನವನ್ನು ಕೈ ಬಿಡುವಂತೆ ಒತ್ತಾಯಿಸಿ.  ಇಲ್ಲದಿದ್ದಲ್ಲಿ ಇವತ್ತು ಶುರುವಾದ ಈ ಹೊರ ಬಗೆಯ ಹೇರಿಕೆ ಮುಂದೆ ದೊಡ್ಡ ಅನಾಹುತವನ್ನೇ ತಂದೀತು!
ನೀವು ಬರೆಯಬೇಕಾದ ಮೆಟ್ರೋ ಅಧಿಕಾರಿಗಳ ವಿಳಾಸ: sivasailam@bmrc.co.insudhirchandra@bmrc.co.invasanthrao@bmrc.co.inbmrcl@dataone.in
ಮೂಲ ಲೇಖನ-http://vasantabanda.blogspot.in/2011/10/namma-metro-nijakku-nammada.html

ಮೆಟ್ರೋಲಿ ಹಿಂದೀ: ಜನರ ದೂರು ಮತ್ತು ಅಧಿಕಾರಿಗಳ ಜೋರು!!

ನಮ್ಮ ಮೆಟ್ರೋದಲ್ಲಿ ಹಿಂದೀಗೆ ಸ್ಥಾನ ಕೊಟ್ಟಿರೋದ್ರು ಬಗ್ಗೆ ಕಳವಳ ವ್ಯಕ್ತಪಡಿಸಿ ಸಂಬಂಧಿಸಿದ “ನಮ್ಮ ಮೆಟ್ರೋ” ಅಧಿಕಾರಿಗಳಿಗೆ ದೂರುಗಳನ್ನು ನೀಡಿದ್ದ ಕೆಲ ಓದುಗರು ಮೆಟ್ರೋದಿಂದ ಬಂದಿರೋ ಉತ್ತರಗಳನ್ನು ನೋಡಿ ದಂಗಾಗಿದ್ದಾರೆ ಗುರೂ! ಬಳಗದ ಜೊತೆ ನಮ್ಮ ಮೆಟ್ರೋ ಮೇಲಧಿಕಾರಿಗಳ ಮಿಂಚೆಯನ್ನು ಹಂಚಿಕೊಂಡಿರುವ ಈ ಗೆಳೆಯರ ಅನುಭವ ನಿಜಕ್ಕೂ ಸಾರ್ವಜನಿಕ ಸೇವೆಯಲ್ಲಿರುವವರ ಮನಸ್ಥಿತಿ ಹೀಗೂ ಇರಬಹುದಾ? ಎನ್ನುವ ಅನುಮಾನ ಹುಟ್ಟಿಸುವಂತಿದೆ.

ಉದ್ಧಟತನದ ಉತ್ತರಗಳು!

“ಕನ್ನಡದಲ್ಲಿ ನಿಮಗೆ ಸೇವೆ ಸಿಗುತ್ತಿರುವ ತನಕ ನಿಮಗೆ ಅತೃಪ್ತಿ ಇರಬಾರದು!

ಇನ್ಮುಂದೆ ನನಗೆ ನೀವು ಪತ್ರ ಬರೆಯೋ ಅಗತ್ಯವಿಲ್ಲ!

ಬೇಕಾದ್ರೆ ನ್ಯಾಯಾಲಯಕ್ಕೆ ಹೋಗಿ!

ಸಂವಿಧಾನದಲ್ಲಿ ಬರೆದಿರೋದ್ರು ಬಗ್ಗೆ ನಿಮ್ಮ ಕಾನೂನು ಸಲಹೆಗಾರರಿಂದ ಸಲಹೆ ಪಡ್ಕೊಂಡು ಸರಿಯಾಗಿ ತಿಳ್ಕೊಳ್ಳಿ !

ನಿಮ್ಮ ಹಿಂದೀ ದ್ವೇಷವನ್ನು ಬಿಡಿ!

ಹಿಂದೀ ದ್ವೇಷದ ಚಳವಳಿಯನ್ನು ಬಿಡಿ!

ಸ್ವಲ್ಪ ಸಹನಶೀಲತೆಯನ್ನು ಮೈಗೂಡಿಸಿಕೊಳ್ಳಿ!

ನಾವು ರಾಷ್ಟ್ರೀಯ ಏಕತೆಗಾಗಿ ರೂಪಿಸಿರುವ ಸಾಧನಗಳಲ್ಲಿ ಒಂದಾದ ತ್ರಿಭಾಷಾಸೂತ್ರದ ನೀತಿಯನ್ನು ಅಳವಡಿಸಿಕೊಂಡಿದ್ದೇವೆ.

ಇಲ್ಲಿನ ಸೆಕ್ಯೂರಿಟಿ ಗಾರ್ಡ್ ಕನ್ನಡದಲ್ಲಿ ತರಬೇತಿ ಪಡೆದಿಲ್ಲ. ಅವನನ್ನು ಮಾತಾಡಿಸಿ ಅವನ ಕರ್ತವ್ಯಕ್ಕೆ ತೊಂದರೆ ಮಾಡಿದ್ದೀರಿ, ನಿಮ್ಮ ದೂರೇನಿದ್ದರೂ ಸಂಬಂಧಿಸಿದ ಸಾರ್ವಜನಿಕ ಸಂಪರ್ಕ ಅಧಿಕಾರಿಯ ಹತ್ತಿರ ಮಾತಾಡಿಕೊಳ್ಳಿ”

ದೇಶದ ಏಕತೆಗಾಗಿ ಹಿಂದೀನಾ ಹಾಕಿದೀವಿ… ತೆಪ್ಪಗಿರಿ ಎನ್ನುವ ಧ್ವನಿಯಲ್ಲಿ ಹೀಗೆಲ್ಲಾ ಉತ್ತರ ಬರೆದಿರೋದು ಮೆಟ್ರೋ ಸಂಸ್ಥೆಯ ಯಾವುದೋ ಸಣ್ಣ ಸ್ತರದ ಅಧಿಕಾರಿಯಲ್ಲ… ಅದು ಮೆಟ್ರೋದ ವ್ಯವಸ್ಥಾಪಕ ನಿರ್ದೇಶಕರಾದ ಶ್ರೀ ಶ್ರೀ ಸಿವಸೈಲಂ ಅವರದ್ದು! ಅಬ್ಬಾ ಎಂತಹ ಸೌಜನ್ಯಾ ಅಲ್ವಾ? ಸಾಹೇಬರ ಉತ್ತರದ ಧಾಟಿಯನ್ನು ಬದಿಗಿಟ್ಟು ಅವರು ನೀಡಿರುವ ಕಾರಣಗಳತ್ತ ಕಣ್ಣು ಹಾಯಿಸಿದರೆ ಮುಖ್ಯವಾಗಿ ಹಿಂದೀ ಬಳಸಲು ಅವರು ನೀಡಿರುವ ಸಮರ್ಥನೆ ಕೇಂದ್ರ ಸರ್ಕಾರದ ತ್ರಿಭಾಷಾ ಸೂತ್ರದ ಬಗ್ಗೆ, ನಮ್ಮ ಮೆಟ್ರೋದಲ್ಲಿ ಕೇಂದ್ರಸರ್ಕಾರ ಹಣ ಹೂಡಿರುವ ಕಾರಣದಿಂದಾಗಿಯೂ, ದೇಶದ ಒಗ್ಗಟ್ಟಿಗಾಗಿಯೂ ಹಿಂದೀಯನ್ನು ಬಳಸಿದ್ದೇವೆ ಎಂದಿದ್ದಾರೆ. ನಮ್ಮ ನಾಡಿನಲ್ಲಿ ನಮ್ಮದಲ್ಲದ ಭಾಷೆ ಯಾಕೆ ಬಳಸಿದ್ದೀರಿ ಎಂದರೆ ಅದಕ್ಕೆ ಹಿಂದೀ ದ್ವೇಷ ಚಳವಳಿ ಎನ್ನುವ ಹೆಸರಿಡುವ ಅಧಿಕಾರವನ್ನು ಇವರಿಗ್ಯಾರು ಕೊಟ್ಟರೋ ಕಾಣೆವು! ಸುರಕ್ಷತಾ ಸಿಬ್ಬಂದಿಗೆ ಕನ್ನಡ ಬಾರದಿರುವುದನ್ನು ಸಮರ್ಥಿಸುತ್ತಾ ಅವರನ್ನು ಮಾತಾಡಿಸಿ ಕರ್ತವ್ಯಕ್ಕೆ ತೊಂದರೆ ಕೊಟ್ಟಿದ್ದೀರಿ ಎಂದು ಪ್ರತಿ ದೂರುವುದರ ಹಿಂದೆ ಹೇಗಾದರೂ ಸರಿ, ಬಾಯಿ ಮುಚ್ಚಿಸುವ ಮನಸ್ಥಿತಿಯಲ್ಲದೆ ಬೇರೇನೂ ಇದ್ದಂತಿಲ್ಲ… ನಾಳೆ ಯಾವುದಾದರೂ ಅಪಾಯಕಾರಿ ಸನ್ನಿವೇಶವುಂಟಾದರೆ ನಾವು ಸೆಕ್ಯುರಿಟಿಗೆ ತಿಳಿಸಬೇಕೋ ಬೇಡವೋ? ಕನ್ನಡ ಬಾರದವರಿಗೆ ಹೇಗೆ ತಿಳಿಸಬೇಕು? ಎನ್ನುವ ಬಗ್ಗೆ ಕಾಳಜಿಯಾಗಲೀ ಆಲೋಚನೆಯಾಗಲೀ ಇವರುಗಳಿಗೆ ಇದ್ದಂತಿಲ್ಲ!
ತ್ರಿಭಾಷಾ ಸೂತ್ರ ರಾಷ್ಟ್ರೀಯ ನೀತಿಯೇ? ಮೆಟ್ರೋಗೆ ಅನ್ವಯಿಸುವುದೇ?
 
ಭಾರತದ ಸಂವಿಧಾನದ ಭಾಗ XVIIರಲ್ಲಿ ಭಾಷಾನೀತಿಯ ಬಗ್ಗೆ ಹೇಳಲಾಗಿದೆ. ಇದರಂತೆ ಹಿಂದೀ ಮತ್ತು ಇಂಗ್ಲೀಷುಗಳನ್ನು ಭಾರತದ ಕೇಂದ್ರಸರ್ಕಾರದ ಆಡಳಿತ ಭಾಷೆಗಳನ್ನಾಗಿ ಘೋಷಿಸಲಾಗಿದೆ. (ಇಂಗ್ಲೀಷು ಸೇರಿಕೊಂಡ/ ಇಂದಿಗೂ ಉಳಿದುಕೊಂಡ ಕಥನ ಬೇರೆಯದೇ ಇದೆ). ಇದರ ಅಂಗವಾಗೇ ೧೯೬೭ರಲ್ಲಿ ರೂಪುಗೊಂಡು ೧೯೬೮ರಲ್ಲಿ ಸಂಸತ್ತಿನ ಎರಡೂ ಸದನಗಳಲ್ಲಿ ಮಂಡನೆಯಾಗಿ ಅಂಗೀಕಾರವಾದದ್ದೇ “ಆಡಳಿತ ಭಾಷಾ ನಿರ್ಣಯ, ೧೯೬೮“. ಇದರ ಅಂಗವಾಗಿಯೇ “ತ್ರಿಭಾಷಾ ಸೂತ್ರ” ರೂಪುಗೊಂಡಿತು. ಮೂಲತಃ ಕೇಂದ್ರಸರ್ಕಾರಿ ನೌಕರಿಯ ಪ್ರವೇಶ ಪರೀಕ್ಷೆಗಳನ್ನು ಹಿಂದೀ/ ಇಂಗ್ಲೀಷುಗಳಲ್ಲಿ ಮಾತ್ರಾ ನಡೆಸುವುದಕ್ಕೆ ಅನೇಕ ಹಿಂದೀಯೇತರ ರಾಜ್ಯಗಳು ವಿರೋಧ ಸೂಚಿಸಿ, ಹೋರಾಟ ನಡೆಸಿದ್ದರಿಂದ ಹುಟ್ಟಿಕೊಂಡ ರಾಜೀಸೂತ್ರ “ತ್ರಿಭಾಷಾ ಸೂತ್ರ” ಎಂದರೆ ತಪ್ಪಾಗಲಾರದು. ಕೇಂದ್ರಸರ್ಕಾರಿ ನೌಕರಿಗಳ ಪರೀಕ್ಷೆಗಳನ್ನು ಎಂಟನೇ ಪರಿಚ್ಛೇಧದಲ್ಲಿ ಪಟ್ಟಿ ಮಾಡಿರುವ ಭಾಷೆಗಳಲ್ಲೂ ನಡೆಸಲು ಅವಕಾಶ ನೀಡುವ ಈ ನಿರ್ಣಯವು “ರಾಜ್ಯಸರ್ಕಾರಗಳ ಜೊತೆ ಸಮಾಲೋಚಿಸಿ” ರಾಷ್ಟ್ರೀಯ ಏಕತೆಯನ್ನು ಮೂಡಿಸಲು ತ್ರಿಭಾಷಾ ಸೂತ್ರವನ್ನು ಜಾರಿಮಾಡಬೇಕು ಎಂದು ಹೇಳಿದೆ. ತ್ರಿಭಾಷಾ ಸೂತ್ರದ ಅನ್ವಯವಾಗಿ ಹಿಂದೀ ಭಾಷಿಕ ಪ್ರದೇಶಗಳ ಮಕ್ಕಳು ಹಿಂದೀ – ಇಂಗ್ಲೀಷ್ ಜೊತೆಯಲ್ಲಿ ಇನ್ನೊಂದು ಭಾರತೀಯ ಭಾಷೆಯನ್ನು (ವಿಶೇಷವಾಗಿ ದಕ್ಷಿಣ ಭಾರತೀಯ ಭಾಷೆಯನ್ನು) ಕಲಿಯತಕ್ಕದ್ದು ಮತ್ತು ಅಂತೆಯೇ ಹಿಂದೀಯೇತರ ರಾಜ್ಯಗಳ ಮಕ್ಕಳು ರಾಜ್ಯಭಾಷೆ – ಇಂಗ್ಲೀಷ್ – ಹಿಂದೀಯನ್ನು ಕಲಿಯತಕ್ಕದ್ದು ಎನ್ನಲಾಗಿದೆ. ಈ ನಿರ್ಣಯದಲ್ಲಿ ಕೇಂದ್ರಸರ್ಕಾರ ಹಣ ಹೂಡುವ ಸಾರ್ವಜನಿಕ ಯೋಜನೆಗಳಲ್ಲಿ ತ್ರಿಭಾಷಾ ಸೂತ್ರ ಇರಬೇಕು ಎಂದು ಎಲ್ಲಿದೆಯೋ ಹುಡುಕಿದರೂ ಸಿಗುತ್ತಿಲ್ಲಾ ಗುರೂ!ಕೇಂದ್ರದ ಒಂದು ೨,೦೦೦ ಕೋಟಿಗೆ ಹಿಂದೀ, ರಾಜ್ಯದ ವಾರ್ಷಿಕ ೮೦,೦೦೦ ಕೋಟಿಗೆ?

ಕೇಂದ್ರಸರ್ಕಾರ ಇಂಥದ್ದೊಂದು ಸೂಚನೆಯನ್ನು ಮೆಟ್ರೋಗೆ ನೀಡಿದೆಯೋ ಇಲ್ಲವೋ ಗೊತ್ತಿಲ್ಲ. ಆದರೆ ಮೆಟ್ರೋದ ಶ್ರೀ ಸಿವಸೈಲಂ ಅವರು ಮಾತ್ರಾ, ತಾವು ಭಾರತದ ಏಕತೆಯ ಹರಿಕಾರರೆನ್ನುವಂತೆ ಮಾತಾಡುತ್ತಾ ಕನ್ನಡಿಗರಿಗೆ ಸಹಿಷ್ಣುತೆಯನ್ನು ಬೋಧಿಸುತ್ತಿರುವುದನ್ನು ಕಂಡಾಗ ವಿಪರ್ಯಾಸವೆನ್ನಿಸುತ್ತದೆ. ಆದರೂ ಮೆಟ್ರೋ ಯೋಜನೆಯಲ್ಲಿ ಸುಮಾರು ೩೦% ಹೂಡಿಕೆ ಹೊಂದಿರುವ ಕಾರಣದಿಂದಲೇ ಇಲ್ಲಿ ಹಿಂದೀ ಇರಬೇಕು ಎನ್ನುವುದಾದರೆ ಪ್ರತಿವರ್ಷ ಸುಮಾರು ೮೦,೦೦೦ ಕೋಟಿ ತೆರಿಗೆಯನ್ನು ಕರ್ನಾಟಕದಿಂದ ಸಂಗ್ರಹಿಸುವ ಕೇಂದ್ರಕ್ಕೆ ಕೇಂದ್ರದ ಆಡಳಿತದಲ್ಲಿ ಕನ್ನಡ ಇರಬೇಕೆಂಬುದು ಅರಿವಾಗದೇ? ಮೆಟ್ರೋ ರೈಲು ಯೋಜನೆಗೆ ಜಪಾನ್ ದೇಶವೂ ಹಣಕಾಸು ನೀಡಿದೆ (ಸಾಲವಾಗಿ). ಹಾಗಾಗಿ ಜಪಾನಿ ಭಾಷೆಯೂ ಇರಬೇಕಲ್ಲವೇ? ಕೇಂದ್ರಸರ್ಕಾರ ರಾಜ್ಯದ/ ನಗರಗಳ/ ಪಟ್ಟಣಗಳ/ ಹಳ್ಳಿಗಳ ಹತ್ತಾರು ಯೋಜನೆಗಳಿಗೆ ಅನುದಾನ ನೀಡುತ್ತದೆ. ಸರ್ವಶಿಕ್ಷಾ ಅಭಿಯಾನ/ ನರ್ಮ್/ ಪ್ರಧಾನಮಂತ್ರಿ ಗ್ರಾಮ ಸಡಕ್/ ಜವಾಹರ್ ರೋಜಗಾರ್ ಯೋಜನೆಗಳೇ ಮೊದಲಾದ ಯೋಜನೆಗಳಲ್ಲೆಲ್ಲಾ ಹಿಂದೀ ಇರಬೇಕೆಂದು ಕೇಂದ್ರ ನಿಬಂಧನೆ ಮಾಡಲಾದೀತೇ? ಹಾಗೆ ಮಾಡುವುದಾದರೆ ವಿಶ್ವಸಂಸ್ಥೆಯಿಂದ ಸಾಕಷ್ಟು ಹಣ ಪಡೆಯುವ ಭಾರತ ಸರ್ಕಾರಕ್ಕೆ “ವಿಶ್ವಸಂಸ್ಥೆಯ ಭಾಷಾನೀತಿ“ಯನ್ನು ಪಾಲಿಸಬೇಕೆಂಬ ನಿಬಂಧನೆಯಿಲ್ಲವೇ? ಇಷ್ಟಕ್ಕೂ ಕೇಂದ್ರಸರ್ಕಾರಿ ಕಛೇರಿಗಳಾದ ಪಾಸ್‍ಪೋರ್ಟ್ ಕಛೇರಿಯೇ ಮೊದಲಾದೆಡೆ ತ್ರಿಭಾಷಾ ಸೂತ್ರ ಎಲ್ಲಿ ಪರಿಣಾಮಕಾರಿಯಾಗಿ ಜಾರಿಯಾಗಿದೆ? ಪಾಸ್‍ಪೋರ್ಟ್ ಅರ್ಜಿ, ಜೀವವಿಮೆ, ಬ್ಯಾಂಕ್ ಚೆಕ್ಕುಗಳಲ್ಲಿ ತ್ರಿಭಾಷೆ ಯಾಕಿಲ್ಲಾ? ಇವೆಲ್ಲಾ ಪ್ರಶ್ನೆಗಳಿಗೆ ಉತ್ತರ ಕೊಡುವವರಾದರೂ ಯಾರು ಗುರೂ?!

ಕೊನೆಹನಿ: ಇರುವ ಗ್ರಾಹಕ ಒಬ್ಬನಾದರೂ ಕೂಡಾ, ಆ ದೂರಿನ ದನಿ ಒಂಟಿಯಾಗಿದ್ದರೂ ಕೂಡಾ ಸೌಜನ್ಯದಿಂದ ಉತ್ತರಿಸುವುದನ್ನು, ದೂರು ಕೊಟ್ಟವರನ್ನೇ ದೂರುವುದನ್ನು ಬಿಡುವುದನ್ನೂ ಮೆಟ್ರೋ ಅಧಿಕಾರಿಗಳಿಗೆ ಸರ್ಕಾರ ಕಲಿಸಿಕೊಟ್ಟೀತೆ? ಕರ್ನಾಟಕ ರಾಜ್ಯಸರ್ಕಾರದ ಕಚ್ಚದ, ಭುಸುಗುಟ್ಟದ “ಕನ್ನಡ ಅಭಿವೃದ್ಧಿ ಪ್ರಾಧಿಕಾರ”ವೆಂಬ ಕನ್ನಡ ಕಾವಲು ಸರ್ಪ ಈಗಾದರೂ ಭುಸುಗುಟ್ಟೀತೇ?

ಮೂಲ ಲೇಖನ-http://enguru.blogspot.in/2011/10/metroli-himdi-janara-dooru-mattu.html

ನಮ್ಮ ಮೆಟ್ರೋ: ಕೇಂದ್ರದ ಒಪ್ಪಿಗೆಪತ್ರದಲ್ಲೇನಿದೆ ಗೊತ್ತಾ?

(ಫೋಟೋ ಕೃಪೆ: http://sandeepvarma.com)
ಬೆಂಗಳೂರಿನ ನಮ್ಮ ಮೆಟ್ರೋ ಬಗ್ಗೆ ಬಿಎಂಆರ್‌‍ಸಿಎಲ್ ಸಂಸ್ಥೆಯ ಮಿಂಬಲೆಯಲ್ಲಿ ಕೊಂಚ ಹುಡುಕಾಟ ನಡೆಸಿದರೆ ಒಳ್ಳೊಳ್ಳೆ ಮಾಹಿತಿಗಳು ಸಿಗುತ್ವೆ! ಮೊನ್ನೆ ಅದರ ವ್ಯವಸ್ಥಾಪಕ ನಿರ್ದೇಶಕರಾದ ಶ್ರೀ ಸಿವಸೈಲಂ ಅವರು “ಇದು ಕೇಂದ್ರಸರ್ಕಾರದ ಅಧೀನ ಸಂಸ್ಥೆ… ಅದುಕ್ಕೇ ಹಿಂದೀ ಹಾಕ್ತೀವಿ” ಎನ್ನುವ ಧ್ವನಿಯಲ್ಲಿ ಮಾತಾಡಿದ್ದನ್ನು ಓದಿಯೇ ಇದ್ದೇವೆ. ಆ ಹಿನ್ನೆಲೆಯಲ್ಲಿ ರಾಜ್ಯ ಕೇಂದ್ರಗಳ ನಡುವಿನ ಈ ಜಂಟಿ ಯೋಜನೆಯ ಇತಿಹಾಸ ನೋಡಿದರೆ, ಭಾರತ ಸರ್ಕಾರ ತನ್ನ ರಾಜ್ಯಗಳನ್ನು ಹೇಗೆ ನಡೆಸಿಕೊಳ್ಳುತ್ತದೆ? ಒಕ್ಕೂಟದಲ್ಲಿ ರಾಜ್ಯಗಳನ್ನು ಏನೆಂದು ಪರಿಗಣಿಸುತ್ತದೆ? ಎಂಬುದರ ಬಗ್ಗೆ ಸುಳುಹು ನೀಡೋ ಒಂದು ದಾಖಲೆಯನ್ನು ಇಲ್ಲಿ ನೋಡಿ!
 
ಕೇಂದ್ರದ ಕರಾರುಗಳು ರಾಜ್ಯದ ಕೊಡುಗೆ
 
ನಮ್ಮ ಮೆಟ್ರೋ ಸಂಸ್ಥೆಯನ್ನು ಕರ್ನಾಟಕ ರಾಜ್ಯ ಸರ್ಕಾರ ಆರಂಭಿಸಿದ್ದು ೧೯೯೪ರಲ್ಲಿ. ಇಡೀ ಯೋಜನೆಯನ್ನು ರೂಪಿಸಿ ರಾಜ್ಯಸರ್ಕಾರ ಚಾಲನೆ ನೀಡಿದ್ದು ೨೦೦೫ರಲ್ಲಿ. ಇದಕ್ಕೆ ಕೇಂದ್ರಸರ್ಕಾರವು ಒಪ್ಪಿಗೆ ನೀಡಿದ್ದು ೨೦೦೬ರಲ್ಲಿ. ಈ ಒಪ್ಪಿಗೆ ಪತ್ರದ ಸಾರಾಂಶ ನೋಡಿದಾಗ ಭಾರತ ಒಕ್ಕೂಟ ವ್ಯವಸ್ಥೆಯಲ್ಲಿ ರಾಜ್ಯಗಳೆಲ್ಲಾ ಭಾಗೀದಾರರಲ್ಲದೆ ಸಾಮಂತರಾಗಿದ್ದಾವೆನ್ನುವ ಅನುಮಾನ ಓದುಗರಲ್ಲಿ ಮೂಡಿದಲ್ಲಿ ಅಚ್ಚರಿಯಿಲ್ಲ. ಈ ಒಪ್ಪಿಗೆ ಪತ್ರದಲ್ಲೇನಿದೆ ನೋಡೋಣ ಬನ್ನಿ:

೭. ಕೆಳಗಿನ ಸಮಿತಿಗಳನ್ನು ರಚಿಸತಕ್ಕದ್ದು:

ಉನ್ನತಾಧಿಕಾರವುಳ್ಳ ಜಾರಿ ಸಮಿತಿ: ಮೆಟ್ರೋ ಯೋಜನೆಯನ್ನು ಜಾರಿ ಮಾಡುವಲ್ಲಿ ಎದುರಾಗುವ ತೊಡಕುಗಳನ್ನು ನಿವಾರಿಸುವ ಹೊಣೆ ಈ ಸಮಿತಿಯದ್ದು. ನೆಲ ವಶಪಡಿಸಿಕೊಳ್ಳುವಲ್ಲಿ, ಸೌಕರ್ಯ ಸರಬರಾಜು ಮಾರ್ಗ ಬದಲಾವಣೆ, ಮೆಟ್ರೋ ಯೋಜಿತ ಮಾರ್ಗಕ್ಕೆ ಅಡ್ಡಿಯಾಗುವ ಕಟ್ಟಡ/ ನಿರ್ಮಾಣಗಳ ಸ್ಥಳಾಂತರ, ಯೋಜನೆಯಿಂದಾಗಿ ಸಂತ್ರಸ್ತರಾಗುವ ಜನರ ಪುನರ್ವಸತಿಯೇ ಮೊದಲಾದವುಗಳನ್ನು ನಿಭಾಯಿಸುವುದು ಈ ಸಮಿತಿಯ ಹೊಣೆಯಾಗಿರುತ್ತದೆ. ಈ ಸಮಿತಿಯು ಕರ್ನಾಟಕ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿಗಳನ್ನು ಮುಖ್ಯಸ್ಥರನ್ನಾಗಿ ಹೊಂದಿರುತ್ತದೆ. ಸಂಬಂಧಪಟ್ಟ ಇಲಾಖೆಗಳ ಕಾರ್ಯದರ್ಶಿಗಳು, ಜನಪ್ರತಿನಿಧಿ ಸಂಸ್ಥೆಗಳ ಮುಖ್ಯಸ್ಥರುಗಳು ಈ ಸಮಿತಿಯ ಇತರೆ ಸದಸ್ಯರಾಗಿರುತ್ತಾರೆ. ಈ ಸಮಿತಿಯು ತಿಂಗಳಿಗೊಮ್ಮೆ ಸಭೆ ಸೇರಿ ಸಂಬಂಧಪಟ್ಟ ವಿಷಯಗಳನ್ನು ಚರ್ಚಿಸಿ ಸಮಸ್ಯೆಗಳನ್ನು ಬಗೆಹರಿಸುತ್ತದೆ.

ಸರ್ವೋನ್ನತ ಸಮಿತಿ: ಕರ್ನಾಟಕದ ಒಬ್ಬ ಸದಸ್ಯರನ್ನು ಸಮಿತಿಗೆ ಸೇರಿಸಿಕೊಳ್ಳುವ ಮೂಲಕ ಬೆಂಗಳೂರಿನ ನಮ್ಮ ಮೆಟ್ರೋವನ್ನೂ ಕೂಡಾ ನವದೆಹಲಿಯಲ್ಲಿನ ಮೆಟ್ರೋ ಸಂಸ್ಥೆಯನ್ನು ನಿಯಂತ್ರಿಸುತ್ತಿರುವ ಉನ್ನತ ಸಮಿತಿಯ ವ್ಯಾಪ್ತಿಗೆ ಸೇರಿಸಲಾಗಿದೆ.

ಮಂತ್ರಿಗಳ ಸಮಿತಿ: ಕರ್ನಾಟಕದ ಮುಖ್ಯಮಂತ್ರಿಯನ್ನು ಇದರ ಶಾಶ್ವತ ಆಹ್ವಾನಿತರನ್ನಾಗಿಸುವ ಮೂಲಕ “ನಿಯಮಗಳನ್ನು ರೂಪಿಸುವ ಹಾಗೂ  ದೆಹಲಿ ಮೆಟ್ರೋದ ಪ್ರಗತಿಯನ್ನು ಪರಿಶೀಲಿಸುವ” ಹೊಣೆಗಾರಿಕೆಯುಳ್ಳ ಸಮಿತಿಯ ವ್ಯಾಪ್ತಿಗೆ ಬೆಂಗಳೂರು ಮೆಟ್ರೋವನ್ನೂ ಸೇರಿಸಲಾಗಿದೆ.

೮. ನಿಬಂಧನೆಗಳು:

ಇಡೀ ಯೋಜನೆಗೆ ಬೇಕಾದ ಭೂಮಿಯ ಬೆಲೆಯನ್ನು ಕರ್ನಾಟಕ ಸರ್ಕಾರವು ಬಡ್ಡಿ ರಹಿತ ಅಧೀನ ಸಾಲದ ಮೂಲಕ ಭರಿಸತಕ್ಕದ್ದು.

ಕರ್ನಾಟಕ ಸರ್ಕಾರವು ಇಡೀ ಯೋಜನೆಗೆ ಅಗತ್ಯವಿರುವ ವಿದ್ಯುತ್ತನ್ನು ಯಾವುದೇ ಲಾಭ ನಷ್ಟವಿಲ್ಲದ ದರದಲ್ಲಿ ಪೂರೈಸತಕ್ಕದ್ದು.

ಮೂಲಯೋಜನೆಯ ಲೆಕ್ಕಾಚಾರದಂತೆ ಪ್ರಯಾಣಿಕರನ್ನು ಸೆಳೆಯಲು ಪ್ರಯಾಣ ಬೆಲೆ ನಿರ್ಧಾರವೇ ಮೊದಲಾದ ಕ್ರಮಗಳ ಮೂಲಕ ರಾಜ್ಯಸರ್ಕಾರವು ಕ್ರಮತೆಗೆದುಕೊಳ್ಳತಕ್ಕದ್ದು.

ಕರ್ನಾಟಕ ಸರ್ಕಾರವು ಮೆಟ್ರೋ ಪ್ರಯಾಣಿಕರನ್ನು ನಿಲ್ದಾಣಕ್ಕೆ ಕರೆತರುವ ಪೂರಕ ಸಾರಿಗೆ ವ್ಯವಸ್ಥೆಯ ಯೋಜನೆಗಳಿಗೆ ಆದ್ಯತೆ ನೀಡತಕ್ಕದ್ದು.

ಭಾರತ ಸರ್ಕಾರವು ಯೋಜನೆಯ ಎರಡನೇ ವರ್ಷದಲ್ಲಿ ಕೊಳ್ಳಲಾಗುವ ಹೆಚ್ಚುವರಿ ರೈಲುಗಳನ್ನು ಕೊಳ್ಳಲು ಹಣನೀಡುವುದಿಲ್ಲ. ಏಕೆಂದರೆ ಇದು ಯೋಜನೆಯ ಅಂಗವಾಗಿರುವುದಿಲ್ಲ.

ಭಾರತ ಸರ್ಕಾರವು ಯೋಜನೆಯು ಜಾರಿಯಾಗುವ ಸಂದರ್ಭದಲ್ಲಾಗುವ ಹಣಕಾಸು ನಷ್ಟವನ್ನಾಗಲೀ, ಯೋಜನೆಯ ಚಾಲ್ತಿ ವೆಚ್ಚವನ್ನಾಗಲೀ ಭರಿಸುವುದಿಲ್ಲ.

ಇವೆಲ್ಲವನ್ನೂ ಕರ್ನಾಟಕ ಸರ್ಕಾರ/ ವಿಶೇಷ ಉದ್ದೇಶದ ವಾಹಕವೇ ಭರಿಸತಕ್ಕದ್ದು.ಯೋಜನೆಯನ್ನು ಜಾರಿಗೊಳಿಸಿದ ನಂತರ ಬಿಎಂಆರ್‍‍ಸಿಎಲ್ ಸಂಸ್ಥೆಯು ದೀರ್ಘಾವಧಿ ಸಾಲವನ್ನು ಮಾರುಕಟ್ಟೆಯಲ್ಲಿ ಸ್ವತಂತ್ರವಾಗಿ ಹುಟ್ಟಿಸಿಕೊಳ್ಳಬಹುದಾಗಿದೆ ಮತ್ತು ಇದರ ಬಗ್ಗೆ ಸರ್ಕಾರವು ಯಾವುದೇ ರೀತಿಯಲ್ಲಿ ಹೊಣೆಗಾರಿಕೆ ಹೊಂದಿರುವುದಿಲ್ಲ ಮತ್ತು ಗ್ಯಾರಂಟಿಯನ್ನು ನೀಡುವುದಿಲ್ಲ. ಆದಾಗ್ಯೂ ವಿದೇಶಿ ಸಾಲವನ್ನು ಪಡೆಯಲು ಉದ್ದೇಶಿಸಿದಲ್ಲಿ ಕೇಂದ್ರಸರ್ಕಾರವು ಅದಕ್ಕೆಂದೇ ರೂಪಿಸಿರುವ ನಿಯಮಗಳು ಇದಕ್ಕೂ ಅನ್ವಯವಾಗುತ್ತದೆ.

ಇದೆಲ್ಲಕ್ಕೂ ಕಲಶವಿಟ್ಟಂತೆ ನಮ್ಮ ಮೆಟ್ರೋದ ಮುಖ್ಯಸ್ಥರಾದ ಶ್ರೀ ಶ್ರೀ ಶ್ರೀ ಸಿವಸೈಲಂ ಅವರು “ನಮ್ಮ ಮೆಟ್ರೋ”ಲಿ ಹಿಂದೀ ಭಾಷೆಯನ್ನು ಹಾಕೋದು, ಹಿಂದೀ ಭಾಷಿಕರಿಗೆ ಎಲ್ಲಾ ಸೇವೆ ಹಿಂದಿಯಲ್ಲೇ ಸಿಗುವಂತೆ ಮಾಡೋದು, ಭಾರತದ ಏಕತೆಯನ್ನು ಹೆಚ್ಚಿಸುವ ಸಾಧನವೆಂದು ನಂಬಿದವರಂತೆ “ಇದು ಕೇಂದ್ರಸರ್ಕಾರದ ಯೋಜನೆ, ರಾಷ್ಟ್ರೀಯ ಏಕತೆಗಾಗಿ ರೂಪಿಸಿರುವ ರಾಷ್ಟ್ರೀಯ ನಿಯಮದ ರೀತ್ಯಾ ಹಿಂದೀಯನ್ನು ಬಳಸಿದ್ದೇವೆ. ನೀವು ಸ್ವಲ್ಪ ಸಹಿಷ್ಣುಗಳಾಗಬೇಕು” ಎನ್ನೋ ಉಪದೇಶವನ್ನು ನೀಡುತ್ತಿರುವ ಈ ಸಂದರ್ಭದ ಹಿನ್ನೆಲೆಯಲ್ಲಿ ಮೆಟ್ರೋಗೆ ಕೇಂದ್ರಸರ್ಕಾರ ನೀಡಿರುವ ಈ ಒಪ್ಪಿಗೆ ಪತ್ರವನ್ನು ನೋಡಿದಾಗ… ನಿಮಗೆ “ಕೇಂದ್ರಸರ್ಕಾರವು ನಮ್ಮಮೆಟ್ರೋದ ಮೇಲೆ ಅಧಿಕಾರ ಹೊಂದಲು ಬಯಸುತ್ತದೆ ಮತ್ತು ಹೊಣೆಗಾರಿಕೆ ಹೊಂದಲು ಬಯಸುವುದಿಲ್ಲ. ನೀತಿ ನಿಯಮಗಳ ನಿಯಂತ್ರಣ ಬೇಕು, ಲಾಭದಲ್ಲಿ ಪಾಲು ಬೇಕು, ನಷ್ಟವೆಲ್ಲಾ ರಾಜ್ಯಸರ್ಕಾರ ಹೊರಬೇಕು, ಭೂಮಿಯ ಬೆಲೆಯನ್ನೆಲ್ಲಾ ರಾಜ್ಯ ಭರಿಸಬೇಕು, ರಾಜ್ಯಸರ್ಕಾರ ತೆರಿಗೆ ಹಾಕಬಾರದು, ಕೇಂದ್ರ ಮಾತ್ರಾ ತೆರಿಗೆ ವಿನಾಯ್ತಿ ನೀಡುವುದಿಲ್ಲ, ಸಂಸ್ಥೆ ಲಾಭದಾಯಕವಾಗಿ ನಡೆಯಲು ಫೀಡರ್ ವ್ಯವಸ್ಥೆಯನ್ನು ನಷ್ಟವಾದರೂ ರಾಜ್ಯಸರ್ಕಾರ ನಡೆಸಬೇಕು, ಮೆಟ್ರೋಲಿ ಅಗತ್ಯವಿರುವಷ್ಟು ಪ್ರಯಾಣಿಕರನ್ನು ಕರೆತರುವ ಹೊಣೆ ರಾಜ್ಯಸರ್ಕಾರದ್ದು… ಕೇಂದ್ರದ್ದು ಮೆಟ್ರೋನ ನಿಯಂತ್ರಣ ಮಾಡೋದಷ್ಟೇ ಕೆಲಸ, ಹಾಕಿರೋ ಮೂರು ಮತ್ತೊಂದು ಕಾಸಿಗೆ ಹಿಂದೀನ ನಮ್ಮ ಮೇಲೆ ಹೇರೋಕೆ ಮುಂದಾಗಿದ್ದಾರೆ” ಎಂದು ಅನ್ನಿಸಿದರೆ ಅದು ನಮ್ಮ ತಪ್ಪಲ್ಲಾ ಗುರೂ! ಭಾರತದಲ್ಲಿ ಒಕ್ಕೂಟ ವ್ಯವಸ್ಥೆ ಇರೋದೇ ಹೀಗೇ!
 
ಮೂಲ ಲೇಖನ-http://enguru.blogspot.in/2011/11/namma-metro-mattu-okkoota-vyavasthe.html

ನಮ್ಮ ಮೆಟ್ರೋ ಎಂಬ ಹಿಂದೀ ಪ್ರಚಾರಕ!

ಇಷ್ಟಕ್ಕೂ ಭಾರತದ ಭಾಷಾನೀತಿಯನ್ನು ಹುಳುಕಿನದ್ದು ಎಂದು ಕರೆಯಬಹುದೇ? ಎಂಬ ಪ್ರಶ್ನೆಗೆ “ಸಮಾನತೆಯೇ ಜೀವಾಳ, ಇಲ್ಲಿ ಎಲ್ಲರೂ ಸಮಾನರು” ಎಂದು ಬಡಾಯಿ ಕೊಚ್ಚಿಕೊಳ್ಳುವ ಭಾರತ ದೇಶದಲ್ಲಿ ಪ್ರಜಾಪ್ರಭುತ್ವದ ಹೆಸರಲ್ಲಿ, ಬಹುಸಂಖ್ಯಾತರ ನೆಪದಲ್ಲಿ… ನಿಜಕ್ಕೂ ಅರ್ಧಕ್ಕಿಂತಲೂ ಹೆಚ್ಚು ಭಾರತೀಯರನ್ನು ಎರಡನೇ ದರ್ಜೆಯ ಪ್ರಜೆಗಳಾಗಿ ಮಾಡಿರುವುದು ಉತ್ತರವಾಗಿ ಕಾಣುತ್ತದೆ. ಭಾರತವು ತನ್ನ ಸಂವಿಧಾನದಲ್ಲಿ ಬರೆದುಕೊಂಡು ಒಪ್ಪಿಕೊಂಡು ಆಚರಿಸುತ್ತಿರುವ “ಆಡಳಿತ ಭಾಷಾ ನೀತಿ”ಯೇ ಇದಕ್ಕೆ ಕಾರಣವಾಗಿದೆ. ಈ ಕಾರಣದಿಂದಾಗಿಯೇ ನಮ್ಮ ನಿಮ್ಮ ಕೋಟ್ಯಾಂತರ ರೂಪಾಯಿಗಳಷ್ಟು ತೆರಿಗೆ ಹಣವನ್ನು ‘ಹಿಂದೀ ಭಾಷೆಯನ್ನು ಈ ದೇಶದ ಮೂಲೆಮೂಲೆಗಳಿಗೆ ಹರಡಲು’ ಬಳಸಲಾಗುತ್ತಿದೆ. ಈ ಹರಡುವಿಕೆಯ ಹಿಂದಿರುವ ಉದ್ದೇಶವೇ ಇಡೀ ಭಾರತವನ್ನು ಹಿಂದೀ ಭಾಷಿಕರ ಆಡುಂಬೊಲ ಮಾಡುವುದು ಎಂಬಂತೆ ಕಾಣುತ್ತಿದೆ.  ಹಿಂದೀ ಭಾಷಿಕರು ಎಲ್ಲೇ ಹೋಗಲಿ ಅವರ ಬದುಕು ಸರಾಗವಾಗಿರುವಂತೆ ನೋಡಿಕೊಳ್ಳುವುದೇ ಇದರ ಗುರಿಯಾಗಿದೆ. ಇಲ್ಲದಿದ್ದರೆ ಭಾರತದ ಯಾವುದೇ ಮೂಲೆಯಲ್ಲಿನ ಕೇಂದ್ರಸರ್ಕಾರಿ ಕಚೇರಿಯಲ್ಲೂ ಹಿಂದೀಯಲ್ಲಿ ಬರೆಯಲಾದ ಪತ್ರಕ್ಕೆ ಹಿಂದೀಯಲ್ಲೇ ಉತ್ತರಿಸುವುದು ಕಡ್ಡಾಯ ಎನ್ನುವ ಕಾನೂನು ಇರುತ್ತಿರಲಿಲ್ಲ! ಇರಲಿ… ಈ ಹರಡುವಿಕೆಯು ಕೆಲವೆಡೆ ಹೇರಿಕೆಯಾಗಿದ್ದರೆ ಇನ್ನೂ ಕೆಲವೆಡೆ ಹೇರಿಕೆ ಗೊತ್ತೇ ಆಗದಂತಿದೆ. ಇಂಥಾ ಒಂದು ಪುಣ್ಯಕ್ಷೇತ್ರ ನಮ್ಮ ಬೆಂಗಳೂರಿನಲ್ಲೇ ಹರಿದಾಡುತ್ತಿದೆ. ಅದು “ನಮ್ಮ ಮೆಟ್ರೋ” ರೈಲು ಸಂಪರ್ಕ ವ್ಯವಸ್ಥೆ!

ಮೆಟ್ರೋದಲ್ಲಿ ಹಿಂದೀ ನರ್ತನ!
ನಮ್ಮ ಮೆಟ್ರೋದಲ್ಲಿ ಕೇಂದ್ರಸರ್ಕಾರದ ಹಣ ಸ್ವಲ್ಪಮಟ್ಟಿಗೆ ತೊಡಗಿಸಲಾಗಿದೆ ಎನ್ನುವ ಕಾರಣ ನೀಡಿಯೋ, ಕರ್ನಾಟಕವು ತ್ರಿಭಾಷಾಸೂತ್ರವನ್ನು ಒಪ್ಪಿದೆಯೆನ್ನುವ ಕಾರಣ ನೀಡಿಯೋ ಮೂರುಭಾಷೆಗಳಲ್ಲಿ ಎಲ್ಲಾ ಸೇವೆಗಳನ್ನು ನೀಡಲಾಗುತ್ತಿದೆ. ಇದುವರೆವಿಗೆ ಬೆಂಗಳೂರಿನ ಸಾರ್ವಜನಿಕ ಬಳಕೆಯ ಸ್ಥಳೀಯ ಸಾರಿಗೆಯಲ್ಲಿ ಕನ್ನಡ ಮತ್ತು ಇಂಗ್ಲೀಶ್ ಬಿಟ್ಟು ಹಿಂದೀಯನ್ನು ಬಳಸಿರಲಿಲ್ಲಾ! ಇದೀಗ ನಮ್ಮ ಮೆಟ್ರೋದಲ್ಲಿ ಬರಿಯ ಫಲಕಗಳಷ್ಟೇ ಅಲ್ಲದೆ ಹಿಂದೀಯಲ್ಲಿ ಸೂಚನೆಗಳನ್ನು ಕೂಡಾ ನೀಡಲು ಶುರುಮಾಡಿದ್ದಾರೆ. ಅಲ್ಲಾರೀ! ಕನ್ನಡದಲ್ಲಿದೆಯಲ್ಲಾ… ಹಿಂದೀಲಿ ಇದ್ದರೇನು? ಎಂದು ಭಾವಿಸುವ ಜನರಿಗೇನು ನಮ್ಮಲ್ಲಿ ಕೊರತೆಯಿಲ್ಲ. ಆದರೆ ಯೋಚಿಸಿ ನೋಡಿದರೆ.. ಇದರ ಹಿಂದೆ ಹಿಂದೀ ಭಾಷಿಕರ ವಲಸೆಯನ್ನು ಉತ್ತೇಜಿಸುವ, ಆ ಮೂಲಕ ಕರ್ನಾಟಕದಂತಹ ರಾಜ್ಯಗಳ ಜನಲಕ್ಷಣವನ್ನೇ ಬುಡಮೇಲುಗೊಳಿಸುವ ಹುನ್ನಾರ ಕಾಣುತ್ತದೆ. ಈ ನೀತಿಯ ಹಿಂದೆ ಭಾರತದ ಭಾಷಾನೀತಿಯು ಕೆಲಸ ಮಾಡಿರುವುದು ಕಾಣುತ್ತದೆ ಮತ್ತು ಅದರ ಹುಳುಕು ಕಣ್ಣಿಗೆ ರಾಚುತ್ತದೆ!
ಹುಳುಕು ಯಾಕೆಂದರೆ…!
ಇಲ್ಲಿ ಹಿಂದೀಯ ಅಗತ್ಯವೇ ಇಲ್ಲದಿರುವಾಗಲೂ ಹಾಗೆ ಹಿಂದೀಯನ್ನು ಬಳಸಿರುವುದರ ಏಕೈಕ ಉದ್ದೇಶ “ಹಿಂದೀ ಭಾಷಿಕ ಜನರಿಗೆ ಅನುಕೂಲವಾಗಲೀ” ಎನ್ನುವುದೇ ಆಗಿದೆ. ‘ಬೆಂಗಳೂರಿಗೆ ಭಾರತದ ಎಲ್ಲೆಡೆಯಿಂದ ಜನರು ಬರುತ್ತಾರೆ ಹಾಗಾಗಿ ಇಲ್ಲಿ ಹಿಂದೀ ಬೇಕು’ ಎನ್ನುವವರು ಅರಿಯಬೇಕಾದದ್ದು, ಬೆಂಗಳೂರಿನ ಎರಡನೇ ದೊಡ್ಡ ಭಾಷಿಕ ಸಮುದಾಯ ನೂರಾರು ವರ್ಷಗಳ ಹಿಂದೆಯೇ ಇಲ್ಲಿ ಬಂದು ನೆಲೆಸಿರುವ ತೆಲುಗರದ್ದು! ಹಾಗೇ ಉರ್ದು ಭಾಷಿಕರು, ತಮಿಳರು ಎಲ್ಲಾ ಆದಮೇಲೆ ಹಿಂದಿಯವರ ಸರತಿ ಬರುತ್ತದೆ. ಭಾರತೀಯರೆಲ್ಲಾ ಸಮಾನರೆನ್ನುವುದೇ ದಿಟವಾದರೆ ನಮ್ಮ ಮೆಟ್ರೋದಲ್ಲಿ ಕನ್ನಡದ ಜೊತೆಗೆ ತೆಲುಗು, ಉರ್ದು, ತಮಿಳು ಭಾಷೆಗಳೂ ಇರಬೇಕಿತ್ತು! ಬೇಡಪ್ಪಾ… ದೆಹಲಿಯ ಮೆಟ್ರೋದಲ್ಲಿ ಭಾರತದ ಇನ್ಯಾವ ಭಾಷೆಗೆ ಸ್ಥಾನ ನೀಡಿದ್ದಾರೆ? ಅಂದರೆ ಭಾರತದ ಮೂಲೆಮೂಲೆಯಲ್ಲೂ ಆಯಾಜನರ ಭಾಷೆಯ ಜೊತೆಗೆ ಹಿಂದೀಯನ್ನು ಸೇರಿಸುವುದು! ಅದಕ್ಕೆ ಹೆಚ್ಚು ಜನರಿಗೆ ಅದು ಬರುವ ಭಾಷೆ ಎಂದುಬಿಡುವುದು. ಆ ಮೂಲಕ ಜನಸಂಖ್ಯಾ ಸ್ಫೋಟದಿಂದ ನರಳುತ್ತಿರುವ ಹಿಂದೀ ಭಾಷಿಕ ರಾಜ್ಯಗಳ ಜನರಿಗೆ ಕರ್ನಾಟಕದಂತಹ ಸಮೃದ್ಧ ಜನವಿರಳ ಪ್ರದೇಶಗಳಿಗೆ ವಲಸೆ ಹೋಗಲು ಅನುಕೂಲ ಮಾಡಿಕೊಡುವುದು! ಇದು ಯಾವರೀತಿಯಲ್ಲಿ ಸಮಾನತೆಯೇ ಜೀವಾಳ ಎನ್ನುವ ಮಾತಿಗೆ ಹತ್ತಿರವಾಗಿದೆ? ಇನ್ನು ಹೀಗೆ ಮೆಟ್ರೋದಂತಹ ಸ್ಥಳೀಯ ಸಮೂಹ ಸಾರಿಗೆಯಲ್ಲಿ ಹಿಂದೀ ತೂರಿಸಿರುವುದನ್ನು ಸಮಾನತೆಯ ಸಂಕೇತವಾಗಿ ಕಾಣಬೇಕೋ… ಹಿಂದೀ ಸಾಮ್ರಾಜ್ಯಶಾಹಿ ಮನಸ್ಥಿತಿಯ ಪ್ರತೀಕವಾಗಿ ಕಾಣಬೇಕೋ? ಬೆಂಗಳೂರಿಗೆ ವಲಸೆ ಬರುವ ಹಿಂದೀ ಭಾಷಿಕರಿಗೆ ತೊಂದರೆಯಾಗಬಾರದೆನ್ನುವ ಘನ ಉದ್ದೇಶ ಭಾರತ ಸರ್ಕಾರಕ್ಕಿರುವಂತೆಯೇ… ದೆಹಲಿಗೆ ಹೋಗುವ, ದೆಹಲಿಯಲ್ಲಿರುವ ಕನ್ನಡದವರ ಬಗ್ಗೆಯೂ ಇದೆಯೇ? ಅಸಲಿಗೆ ಹೀಗೆ ಎಲ್ಲರಿಗೂ ಅನುಕೂಲ ಮಾಡಿಕೊಡುವಂತಹ ಭಾಷಾನೀತಿ ಭಾರತದಲ್ಲಿದೆಯೇ ಎಂದರೆ ಕಾಣುವುದು ದೊಡ್ಡ ನಿರಾಸೆ!

ಸಮಾನತೆಯ ಕೂಗು!

“ಈ ಹುಳುಕು ಸರಿ ಹೋಗಲಿ… ಎಲ್ಲಾ ಭಾಷೆಗಳಿಗೂ ಸಮಾನ ಸ್ಥಾನಮಾನ ಸಿಗಲಿ. ತನ್ನ ನಾಡಿನಲ್ಲಿ ಆಯಾಭಾಷೆಯ ಸಾರ್ವಭೌಮತ್ವಕ್ಕೆ ಧಕ್ಕೆ ತಾರದಂತಹ ಭಾಷಾನೀತಿ ರೂಪುಗೊಳ್ಳಲಿ” ಎಂಬ ದನಿ ಎತ್ತುವಲ್ಲಿ ನಮ್ಮ ಕನ್ನಡಿಗರೇನು ಹಿಂದೆ ಬಿದ್ದಿಲ್ಲ – ಇದು ಹಿಗ್ಗಿನ,  ಭರವಸೆಯ ವಿಷಯ. ಮೆಟ್ರೋದಲ್ಲಿ ಹಿಂದೀ ತುರುಕಲು ಆರಂಭಿಸಿದಾಗಲೇ ಇದರ ಬಗ್ಗೆ ಸಂಸ್ಥೆಯ ಮುಖ್ಯಸ್ಥರೊಂದಿಗೆ ದೂರು ಸಲ್ಲಿಸಿದವರು ಹಲವರು. ಮೆಟ್ರೋ ಮುಖ್ಯಸ್ಥರ ಉದ್ಧಟತನದ ಉತ್ತರದಿಂದ ಬೇಸತ್ತವರು ಮತ್ತೆ ಕೆಲವರು. ಸೋಲೊಪ್ಪದೆ ಬೆನ್ನು ಹತ್ತಿ ಮೆಟ್ರೋದ ಈ ಹಿಂದೀ ಪರವಾದ ನಿಲುವನ್ನು ಪ್ರಶ್ನಿಸಿ “ಇಂತಹ ನಿಲುವಿಗೆ ಕಾರಣ ವಿವರಿಸಿ” ಎಂದು ಮಾಹಿತಿ ಹಕ್ಕು ಕಾಯ್ದೆಯಲ್ಲಿ ಅರ್ಜಿ ಸಲ್ಲಿಸಿ ನಕ್ಷತ್ರಿಕನ ಹಾಗೆ ಬೆನ್ನು ಹತ್ತಿದವರು ಮತ್ತೆ ಕೆಲವರು. ಮನವಿ, ಕಾಯುವಿಕೆ, ಮೇಲ್ಮನವಿ, ದೂರು,  ವಿಚಾರಣೆ… ಹೀಗೆ ಛಲ ಬಿಡದ ತ್ರಿವಿಕ್ರಮನಂತೆ ಎಲ್ಲಾ ಮೆಟ್ಟಿಲುಗಳನ್ನೂ ಹತ್ತುತ್ತಾ, ಸುಮಾರು ಎರಡು ವರ್ಷಗಳಿಂದಲೂ ಉತ್ಸಾಹ ಬತ್ತಿಸಿಕೊಳ್ಳದೆ ಮೆಟ್ರೋದ ಬೆನ್ನು ಬಿದ್ದಿರುವ ಗೆಳೆಯರು ಆರ್.ಟಿ.ಐಗೆ ಸೂಕ್ತ ಉತ್ತರ ಬರುವವರೆಗೂ ಬಿಡೆನೆಂದು ನ್ಯಾಯದ ಎಲ್ಲಾ ಬಾಗಿಲುಗಳಿಗೆ ಎಡೆತಾಕುತ್ತಿದ್ದಾರೆ. ಇಂದಲ್ಲಾ ನಾಳೆ ಗೆಲುವು ದಕ್ಕೇ ದಕ್ಕುತ್ತದೆ ಎಂಬ ನಂಬಿಕೆಯಲ್ಲಿ… ಸಮಾನತೆಯ ಈ ಕೂಗಿಗೆ ಕನ್ನಡಿಗರ ಬೆಂಬಲ ಬೇಕು! ನಾವೆಲ್ಲರೂ ಇದರ ಬಗ್ಗೆ ದನಿಯೆತ್ತಬೇಕು ಎನ್ನುವ ನಿಲುವು ನಮ್ಮದು!

 

ಮೂಲ ಲೇಖನ-http://enguru.blogspot.in/2013/08/metro-emba-hindee-pracaaraka.html

“ಮೆಟ್ರೋಲಿ ಕನ್ನಡ ಇಲ್ವಾ? ಹಿಂದೀ ಯಾಕೆ ಬೇಡಾ?” ಅಂದ್ರೇ.

(ಮೆಟ್ರೋ ರೈಲು ನಿಲ್ದಾಣ – ಮಹಾತ್ಮಾಗಾಂಧಿ ರಸ್ತೆ)
(ರೈಲು ಹಳಿಯ ಮೇಲಿನ ಹಿಂದೀ ಸುರಕ್ಷತಾ ಸೂಚನೆ)
ಬೆಂಗಳೂರಿನ ಮಾಯಾಲೋಕಕ್ಕೆ ಮೊನ್ನೆ ಹೊಸದಾಗಿ ಸೇರ್ಪಡೆಯಾದ ಮೆಟ್ರೋ ರೈಲು “ನಮ್ಮ ಮೆಟ್ರೋ”, ಕನ್ನಡಿಗರೆಲ್ಲಾ ಹೆಮ್ಮೆ ಪಟ್ಟುಕೊಳ್ಳಲು ಕಾರಣವಾಗಿದೆ. ಮೊನ್ನೆ ಈ ರೈಲಿನಲ್ಲಿ ಪಯಣಿಸಿದವರ ಅನುಭವ ಕಂಡು ಕೇಳಿದಾಗ, ಮೆಟ್ರೋ ಆರಂಭ ಒಂದೆಡೆ ಸಂತಸಕ್ಕೆ ಕಾರಣವಾದರೂ ಮತ್ತೊಂದೆಡೆ ಅತಿ ಆತಂಕಕ್ಕೆ ಕಾರಣವಾಗಿದೆ ಎನ್ನಿಸಿತು. ಏನೀ ಆತಂಕ? ಯಾಕೀ ಆತಂಕ? ಬನ್ನಿ… ನೋಡ್ಮಾ…ನಮ್ಮ ಆತಂಕಕ್ಕೆ  ಕಾರಣವಾಗಿರೋದು ಬೆಂಗಳೂರಿನ ಮೆಟ್ರೋದಲ್ಲಿ ಪ್ರತಿಯೊಂದೂ ಮೂರು ಭಾಷೆಯಲ್ಲಿದೆ ಅನ್ನೋದು. ಇಲ್ಲಿನ ಸ್ಟೇಶನ್ ಹೆಸರುಗಳಿಂದ ಹಿಡಿದು ಮುಂದೆ ಬರುವ ನಿಲ್ದಾಣದ ಬಗ್ಗೆ ರೈಲಿನಲ್ಲಿ ಘೋಷಿಸುತ್ತಿರುವ ಘೋಷಣೆಯವರೆಗೆ ಎಲ್ಲವೂ ಕನ್ನಡ, ಹಿಂದೀ ಮತ್ತು ಇಂಗ್ಲಿಷ್ ಭಾಷೆಗಳಲ್ಲಿವೆ. ಕನ್ನಡದಲ್ಲಿಲ್ಲಾ ಅಂದ್ರೆ ಆತಂಕ ಆಗೋದು ಸರಿ, ಈಗ್ಯಾಕೆ ಆತಂಕ ಅಂತೀರಾ? ಆತಂಕ ಇದು ಹಿಂದೀಯಲ್ಲೂ ಇದೆ ಅನ್ನೋದಕ್ಕೆ ಗುರೂ!


ಕನ್ನಡ ಇಲ್ವಾ? ಇದ್ರೂ ಯಾಕೆ ಆಕ್ಷೇಪ?

 
ಹೌದಲ್ವಾ? ಇಂಥಾ ಪ್ರಶ್ನೆ ಸಾಮಾನ್ಯವಾಗಿ ಈ ಆತಂಕಕ್ಕೆ ಒಳಗಾದವರನ್ನು ಎದುರಾಗ್ತಾನೆ ಇರುತ್ತೆ. ಇಲ್ಲಿ ಆತಂಕ ಇರೋದು  ಕನ್ನಡದವರಿಗೆ ಅನುಕೂಲ ಆಗ್ತಾ ಇದೆಯೋ ಇಲ್ಲವೋ ಅನ್ನೋಕಿಂತ, ಕನ್ನಡನಾಡಿನ ಒಂದೂರಿನ ಬಡಾವಣೆಗಳನ್ನು ಬೆಸೆಯಲು ಇರುವ ಸ್ಥಳೀಯ ಸಾರಿಗೆಯಲ್ಲಿ ಕನ್ನಡವಲ್ಲದ ಇನ್ನೊಂದು ಭಾಷೆ ಇದೆ ಅನ್ನೋದು. ಅರೆರೆ, ಇಲ್ಲಿ ಕನ್ನಡಿಗರು ಮಾತ್ರಾ ಬರ್ತಾರಾ? ನಾವು ಸಂಕುಚಿತ ಮನಸ್ಸಿನವರಾಗಬಾರದು. ಹೊರಗಿಂದ ಬಂದವರಿಗೆ ಕೂಡಾ ಅನುಕೂಲವಾಗಬೇಕು ಅನ್ನೋ ಮಾತು ಕೇಳಿ ಬರುತ್ತೆ. ಸಹಜವೇ ಬಿಡಿ. ಹಾಗಾದಾಗ ನಾವು ಇಡೀ ಪ್ರಪಂಚದಲ್ಲಿ ಹೆಚ್ಚಿನ ಜನರು ಇವತ್ತು ಓದಲು ಕಲಿತಿರುವ ರೋಮನ್ ಲಿಪಿಯನ್ನು ಬಳಸಿದರಾಯ್ತು. ಇಂಗ್ಲಿಷ್ ಭಾಷೆ ಕನ್ನಡದ ಜೊತೆಯಲ್ಲಿ ಇರೋದನ್ನು ಹೇಗೋ ಒಪ್ಪಬಹುದು. ಆದರೆ ಹಿಂದೀಯನ್ನು? ಊಹೂಂ… ಒಪ್ಪಕ್ಕಾಗಲ್ಲಾ ಗುರೂ! ಒಪ್ಪಿದರೆ ನಾಳೆ ಕನ್ನಡಿಗರಿಗೆ ಅಪಾಯ ಕಟ್ಟಿಟ್ಟ ಬುತ್ತಿ. ಅದೆಂಗೆ?
ಹಿಂದೀ ಭಾಷೆ ಕರ್ನಾಟಕಕ್ಕೇ ವಲಸಿಗರನ್ನು ತರುತ್ತೆ!
ಮೆಟ್ರೋಲಿ ಹಿಂದೀಲಿ ಹಾಕಬೇಕು ಅಂತನ್ನೋದು ಮೆಟ್ರೋ ಆಡಳಿತದವರ ನಿರ್ಧಾರವೇ ಆಗಿರಬಹುದು.. ಆದರೆ ಇದರ ಪರಿಣಾಮವೇನಾಗುತ್ತದೆ ಎಂಬುದು ಅವರ ಅರಿವಿನಲ್ಲಿ ಇಲ್ಲದಿದ್ದರೂ ನಮ್ಮ ಅರಿವಿಗೆ ತಂದುಕೊಳ್ಳುವುದು ಒಳಿತು. ದೆಹಲಿಯ ಮೆಟ್ರೋದಲ್ಲಿ ಇದ್ದಿಕ್ಕಿದ್ದಂತೆ ಎಲ್ಲಾ ಫಲಕಗಳೂ, ಸೇವೆಗಳೂ ಕನ್ನಡದಲ್ಲೂ ದೊರೆತರೆ…. ಅಲ್ಲಿನ ಎಫ್.ಎಂ ವಾಹಿನಿಗಳಲ್ಲಿ ಕನ್ನಡ ಹಾಡುಗಳು ಕೇಳಿಬರಲು ಶುರುವಾದರೆ ಏನಾಗುತ್ತದೆ ಎಂದು ಯೋಚಿಸಿ ನೋಡಿ. ಇಲ್ಲಿಂದ ಅಲ್ಲಿಗೆ ಹೋದ ಕನ್ನಡಿಗ “ದೆಹಲೀಲಿ ಕನ್ನಡ ನಡ್ಯುತ್ತೆ, ಬಾಳಕ್ಕೆ ಏನೇನೂ ತೊಡಕಿಲ್ಲಾ ಬನ್ರಪ್ಪಾ” ಅಂತಾ ತನ್ನ ಬಂಧು, ಬಳಗ, ನೆಂಟರು ಪಂಟರು, ಬೆಕ್ಕು, ನಾಯಿ, ಅಂಗಿ, ಚಡ್ಡಿ  ಎಲ್ಲಾನು ಹೊತ್ಕೊಂಡು ದೆಹಲಿಗೆ ವಲಸೆ ಹೋಗಲ್ವಾ? ಇದೇ ಗುರೂ,  ಇಲ್ಲಿ ಹಿಂದೀಲಿ ವ್ಯವಸ್ಥೆಗಳು ಬಂದರೂ ಆಗೋದು… ಅಲ್ವಾ ಗುರೂ! ಮೊದಲೇ ಜನಸಂಖ್ಯಾ ಸ್ಫೋಟದಿಂದ ನರುಳ್ತಾ ಇರೋ ಹಿಂದೀ ಭಾಷಿಕ ಪ್ರದೇಶಗಳ ಜನರು ಕಡಿಮೆ ಜನದಟ್ಟಣೆಯ ಕರ್ನಾಟಕದಂತಹ ಚಿನ್ನದ ನಾಡಿಗೆ ಸುನಾಮಿ ಹಾಗೆ ನುಗ್ಗೋದು ಖಂಡಿತಾ! ಇದರಿಂದಾಗಿ ನಮ್ಮೂರಲ್ಲೇ ನಾಳೆ, ಹಿಂದೀಯಿಲ್ಲದೆ ನಮ್ಮ ಮಕ್ಕಳು ಮರಿ ಬದುಕಲಿಕ್ಕಾಗದ ಪರಿಸ್ಥಿತಿ ಹುಟ್ಟುವುದಿಲ್ಲವೇ? ಈ ಕಾರಣಕ್ಕಾಗಿ ಬೆಂಗಳೂರಿನ ಮೆಟ್ರೋಲಿ ಹಿಂದೀ ಬೇಡ.
ಇದು ಬರೀ ವಲಸೆ ಪ್ರಶ್ನೆಯಲ್ಲ!
ಅಷ್ಟಕ್ಕೂ ಇದು ಬರೀ ವಲಸೆಯ ಪ್ರಶ್ನೆಯೂ ಅಲ್ಲ. ಭಾರತ ಒಂದು ಒಕ್ಕೂಟ, ಇಲ್ಲಿ ಪ್ರತಿಯೊಂದು ಭಾಷೆಯೂ, ಜನಾಂಗವೂ ಸಮಾನ. ಪ್ರತಿಯೊಬ್ಬ ನಾಗರೀಕನಿಗೂ ಸಮಾನ ಹಕ್ಕುಗಳಿವೆ ಎನ್ನುವ ಕೇಂದ್ರಸರ್ಕಾರ ಬೆಂಗಳೂರಿನ ಮೆಟ್ರೋಲಿ ಪಾಲು ಹೊಂದಿದೆ ಎನ್ನುವ ಕಾರಣಕ್ಕೆ ಹಿಂದೀಲಿ ಸೇವೆ ಕೊಡಬೇಕು ಅನ್ನೋದು ಯಾವ ಸೀಮೆಯ ಸಮಾನತೆ? ಕನ್ನಡಿಗರಿಗೆ (ಉಳಿದೆಲ್ಲಾ ಭಾಷಿಕರಿಗೂ) ಇಂಥದೇ ಸೇವೆಯನ್ನು ದೇಶದ ಎಲ್ಲಾ ಮೂಲೆಯಲ್ಲೂ ಒದಗಿಸಿಕೊಡುತ್ತದೆಯೇ? ಇಲ್ಲದಿದ್ದರೆ ಹಿಂದೀ ಭಾಷೆಯವರಿಗೆ ಮಾತ್ರಾ ವಿಶೇಷ ಸವಲತ್ತು ಒದಗಿಸಿಕೊಡುವ ಇಂತಹ ನೀತಿ ಏನನ್ನು ಸಾರುತ್ತದೆ? ವೈವಿಧ್ಯತೆಯಲ್ಲಿ ಏಕತೆಯನ್ನೆ? ಹಿಂದೀ ಸಾಮ್ರಾಜ್ಯಶಾಹಿಯನ್ನೇ? ಸರಿಯಾದ ವ್ಯವಸ್ಥೆಯನ್ನು ಕಟ್ಟುವ ಯೋಗ್ಯತೆ ಸರ್ಕಾರಕ್ಕಿಲ್ಲದಿದ್ದಲ್ಲಿ ಬೇರೆ ಬೇರೆ ದೇಶಗಳಲ್ಲಿನ ವ್ಯವಸ್ಥೆ ನೋಡಿ ಕಲಿಯಲಿ… ಅಲ್ವಾ ಗುರೂ!
ಕೊನೆಹನಿ: ಗುಲಾಮಗಿರಿಯ ಸಂಕೇತವಾದ ಇಂಗ್ಲೀಶ್ ಒಪ್ಪುವ ನೀವು ನಮ್ಮದೇ ನಾಡಿನ ಹಿಂದೀ ಒಪ್ಪಲಾರಿರಾ? ಎನ್ನುವ ಪ್ರಶ್ನೆ ಕೇಳುವವರಿದ್ದಾರೆ. ಅವರು ತಿಳಿಯಬೇಕಾದ್ದು ಒಂದಿದೆ, ಇವತ್ತು ಇಂಗ್ಲೀಶ್ ಒಪ್ಪಿದರೆ, ಇಂಗ್ಲೀಷರು ಇಲ್ಲಿ ಬಂದು ಸಾಮ್ರಾಜ್ಯ ಕಟ್ಟಿ ಕನ್ನಡಿಗರನ್ನು ಎರಡನೇ ದರ್ಜೆಯ ಪ್ರಜೆಗಳನ್ನಾಗಿಸಲಾರರು. ಆದರೆ ಹಿಂದೀ ಒಪ್ಪಿದರೆ ಆಗುವುದು ಅದೇ… ಅನಿಯಂತ್ರಿತ ವಲಸೆಗೆ ವೇಗವಾಹಿಯಾಗಿ ಕೆಲಸಮಾಡುವ ಇದು ಕೆಲವೇ ವರ್ಷಗಳಲ್ಲಿ ಕನ್ನಡಿಗರನ್ನು ಭಾರತದಿಂದೇಕೆ, ಇಡೀ  ಭೂಪಟದಿಂದಲೇ ಹೊಸಕಿ ಹಾಕುತ್ತದೆ.
ಮೂಲ ಲೇಖನ-http://enguru.blogspot.in/2011/10/metro-railalli-kannada-idyallaa-himdee.html
Advertisements