ನಮ್ಮ ಮೆಟ್ರೋ ಎಂಬ ಹಿಂದೀ ಪ್ರಚಾರಕ!
ಇಷ್ಟಕ್ಕೂ ಭಾರತದ ಭಾಷಾನೀತಿಯನ್ನು ಹುಳುಕಿನದ್ದು ಎಂದು ಕರೆಯಬಹುದೇ? ಎಂಬ ಪ್ರಶ್ನೆಗೆ “ಸಮಾನತೆಯೇ ಜೀವಾಳ, ಇಲ್ಲಿ ಎಲ್ಲರೂ ಸಮಾನರು” ಎಂದು ಬಡಾಯಿ ಕೊಚ್ಚಿಕೊಳ್ಳುವ ಭಾರತ ದೇಶದಲ್ಲಿ ಪ್ರಜಾಪ್ರಭುತ್ವದ ಹೆಸರಲ್ಲಿ, ಬಹುಸಂಖ್ಯಾತರ ನೆಪದಲ್ಲಿ… ನಿಜಕ್ಕೂ ಅರ್ಧಕ್ಕಿಂತಲೂ ಹೆಚ್ಚು ಭಾರತೀಯರನ್ನು ಎರಡನೇ ದರ್ಜೆಯ ಪ್ರಜೆಗಳಾಗಿ ಮಾಡಿರುವುದು ಉತ್ತರವಾಗಿ ಕಾಣುತ್ತದೆ. ಭಾರತವು ತನ್ನ ಸಂವಿಧಾನದಲ್ಲಿ ಬರೆದುಕೊಂಡು ಒಪ್ಪಿಕೊಂಡು ಆಚರಿಸುತ್ತಿರುವ “ಆಡಳಿತ ಭಾಷಾ ನೀತಿ”ಯೇ ಇದಕ್ಕೆ ಕಾರಣವಾಗಿದೆ. ಈ ಕಾರಣದಿಂದಾಗಿಯೇ ನಮ್ಮ ನಿಮ್ಮ ಕೋಟ್ಯಾಂತರ ರೂಪಾಯಿಗಳಷ್ಟು ತೆರಿಗೆ ಹಣವನ್ನು ‘ಹಿಂದೀ ಭಾಷೆಯನ್ನು ಈ ದೇಶದ ಮೂಲೆಮೂಲೆಗಳಿಗೆ ಹರಡಲು’ ಬಳಸಲಾಗುತ್ತಿದೆ. ಈ ಹರಡುವಿಕೆಯ ಹಿಂದಿರುವ ಉದ್ದೇಶವೇ ಇಡೀ ಭಾರತವನ್ನು ಹಿಂದೀ ಭಾಷಿಕರ ಆಡುಂಬೊಲ ಮಾಡುವುದು ಎಂಬಂತೆ ಕಾಣುತ್ತಿದೆ. ಹಿಂದೀ ಭಾಷಿಕರು ಎಲ್ಲೇ ಹೋಗಲಿ ಅವರ ಬದುಕು ಸರಾಗವಾಗಿರುವಂತೆ ನೋಡಿಕೊಳ್ಳುವುದೇ ಇದರ ಗುರಿಯಾಗಿದೆ. ಇಲ್ಲದಿದ್ದರೆ ಭಾರತದ ಯಾವುದೇ ಮೂಲೆಯಲ್ಲಿನ ಕೇಂದ್ರಸರ್ಕಾರಿ ಕಚೇರಿಯಲ್ಲೂ ಹಿಂದೀಯಲ್ಲಿ ಬರೆಯಲಾದ ಪತ್ರಕ್ಕೆ ಹಿಂದೀಯಲ್ಲೇ ಉತ್ತರಿಸುವುದು ಕಡ್ಡಾಯ ಎನ್ನುವ ಕಾನೂನು ಇರುತ್ತಿರಲಿಲ್ಲ! ಇರಲಿ… ಈ ಹರಡುವಿಕೆಯು ಕೆಲವೆಡೆ ಹೇರಿಕೆಯಾಗಿದ್ದರೆ ಇನ್ನೂ ಕೆಲವೆಡೆ ಹೇರಿಕೆ ಗೊತ್ತೇ ಆಗದಂತಿದೆ. ಇಂಥಾ ಒಂದು ಪುಣ್ಯಕ್ಷೇತ್ರ ನಮ್ಮ ಬೆಂಗಳೂರಿನಲ್ಲೇ ಹರಿದಾಡುತ್ತಿದೆ. ಅದು “ನಮ್ಮ ಮೆಟ್ರೋ” ರೈಲು ಸಂಪರ್ಕ ವ್ಯವಸ್ಥೆ!
ಸಮಾನತೆಯ ಕೂಗು!
“ಈ ಹುಳುಕು ಸರಿ ಹೋಗಲಿ… ಎಲ್ಲಾ ಭಾಷೆಗಳಿಗೂ ಸಮಾನ ಸ್ಥಾನಮಾನ ಸಿಗಲಿ. ತನ್ನ ನಾಡಿನಲ್ಲಿ ಆಯಾಭಾಷೆಯ ಸಾರ್ವಭೌಮತ್ವಕ್ಕೆ ಧಕ್ಕೆ ತಾರದಂತಹ ಭಾಷಾನೀತಿ ರೂಪುಗೊಳ್ಳಲಿ” ಎಂಬ ದನಿ ಎತ್ತುವಲ್ಲಿ ನಮ್ಮ ಕನ್ನಡಿಗರೇನು ಹಿಂದೆ ಬಿದ್ದಿಲ್ಲ – ಇದು ಹಿಗ್ಗಿನ, ಭರವಸೆಯ ವಿಷಯ. ಮೆಟ್ರೋದಲ್ಲಿ ಹಿಂದೀ ತುರುಕಲು ಆರಂಭಿಸಿದಾಗಲೇ ಇದರ ಬಗ್ಗೆ ಸಂಸ್ಥೆಯ ಮುಖ್ಯಸ್ಥರೊಂದಿಗೆ ದೂರು ಸಲ್ಲಿಸಿದವರು ಹಲವರು. ಮೆಟ್ರೋ ಮುಖ್ಯಸ್ಥರ ಉದ್ಧಟತನದ ಉತ್ತರದಿಂದ ಬೇಸತ್ತವರು ಮತ್ತೆ ಕೆಲವರು. ಸೋಲೊಪ್ಪದೆ ಬೆನ್ನು ಹತ್ತಿ ಮೆಟ್ರೋದ ಈ ಹಿಂದೀ ಪರವಾದ ನಿಲುವನ್ನು ಪ್ರಶ್ನಿಸಿ “ಇಂತಹ ನಿಲುವಿಗೆ ಕಾರಣ ವಿವರಿಸಿ” ಎಂದು ಮಾಹಿತಿ ಹಕ್ಕು ಕಾಯ್ದೆಯಲ್ಲಿ ಅರ್ಜಿ ಸಲ್ಲಿಸಿ ನಕ್ಷತ್ರಿಕನ ಹಾಗೆ ಬೆನ್ನು ಹತ್ತಿದವರು ಮತ್ತೆ ಕೆಲವರು. ಮನವಿ, ಕಾಯುವಿಕೆ, ಮೇಲ್ಮನವಿ, ದೂರು, ವಿಚಾರಣೆ… ಹೀಗೆ ಛಲ ಬಿಡದ ತ್ರಿವಿಕ್ರಮನಂತೆ ಎಲ್ಲಾ ಮೆಟ್ಟಿಲುಗಳನ್ನೂ ಹತ್ತುತ್ತಾ, ಸುಮಾರು ಎರಡು ವರ್ಷಗಳಿಂದಲೂ ಉತ್ಸಾಹ ಬತ್ತಿಸಿಕೊಳ್ಳದೆ ಮೆಟ್ರೋದ ಬೆನ್ನು ಬಿದ್ದಿರುವ ಗೆಳೆಯರು ಆರ್.ಟಿ.ಐಗೆ ಸೂಕ್ತ ಉತ್ತರ ಬರುವವರೆಗೂ ಬಿಡೆನೆಂದು ನ್ಯಾಯದ ಎಲ್ಲಾ ಬಾಗಿಲುಗಳಿಗೆ ಎಡೆತಾಕುತ್ತಿದ್ದಾರೆ. ಇಂದಲ್ಲಾ ನಾಳೆ ಗೆಲುವು ದಕ್ಕೇ ದಕ್ಕುತ್ತದೆ ಎಂಬ ನಂಬಿಕೆಯಲ್ಲಿ… ಸಮಾನತೆಯ ಈ ಕೂಗಿಗೆ ಕನ್ನಡಿಗರ ಬೆಂಬಲ ಬೇಕು! ನಾವೆಲ್ಲರೂ ಇದರ ಬಗ್ಗೆ ದನಿಯೆತ್ತಬೇಕು ಎನ್ನುವ ನಿಲುವು ನಮ್ಮದು!
ಮೂಲ ಲೇಖನ-http://enguru.blogspot.in/2013/08/metro-emba-hindee-pracaaraka.html
Posted on February 26, 2014, in ಲೇಖನಗಳು. Bookmark the permalink. Leave a comment.