ನಮ್ಮ ಮೆಟ್ರೋ ಹಿಂದಿ ಹೇರಿಕೆ

ನಮ್ಮ ಮೆಟ್ರೋ ಯೋಜನೆ ಕರ್ನಾಟಕ ರಾಜ್ಯದ ಒಂದು ನಗರದ ಒಳ ಸಾರಿಗೆ ವ್ಯವಸ್ಥೆ. ರಾಜ್ಯ ಸರ್ಕಾರದ ಈ ಯೋಜನೆಗೆ ಸುಮಾರು ೨೫% ಕೇಂದ್ರ ಸಹಾಯವನ್ನು ಅನುದಾನ ಮತ್ತು ಸಾಲದ ರೂಪದಲ್ಲಿ ನೀಡಿದೆ. ಬೆಂಗಳೂರಿನ ನಗರ ಸಾರಿಗೆಯ ಸ್ವರೂಪವನ್ನೇ ಬದಲಿಸುವ ಈ ವ್ಯವಸ್ಥೆಯಲ್ಲಿ ಬಳಸಲಾಗಿರುವ ಭಾಷಾ ನೀತಿಯನ್ನು ಗಮನಿಸಿದಾಗ ಹಿಂದಿ ಹೇರಿಕೆಯ ಕಬಂಧ ಬಾಹುಗಳು ಬೆಂಗಳೂರನ್ನು ವ್ಯಾಪಿಸಿಕೊಳ್ಳುತ್ತಿರುವ ಎಲ್ಲ ಲಕ್ಷಣಗಳು ಕಾಣುತ್ತಿವೆ.ಕನ್ನಡ, ಇಂಗ್ಲಿಷಿನೊಂದಿಗೆ ಹಿಂದಿಯಿದ್ದರೆ ತೊಂದರೆಯೇನು ಅನ್ನುವ ಪ್ರಶ್ನೆ ಕೆಲವರಲ್ಲಿರಬಹುದು. ಇದು ಮೆಟ್ರೋವೊಂದರ ಪ್ರಶ್ನೆಯಲ್ಲ. ಇಲ್ಲಿ ಗಮನಿಸಬೇಕಾದದ್ದು ಒಂದು ನಾಡಿನ ಎಲ್ಲ ವ್ಯವಸ್ಥೆ ಯಾರಿಗಾಗಿ ಕಲ್ಪಿಸಬೇಕಿದೆ ಅನ್ನುವುದು? ವಲಸೆ ಬರುವ ಜನರಿಗೆ ಅವರ ನುಡಿಯಲ್ಲೇ ಬಸ್ಸು, ರೈಲು, ಸಿನೆಮಾ, ರೇಡಿಯೋ, ವ್ಯಾಪಾರ ವಹಿವಾಟು ಹೀಗೆ ಎಲ್ಲ ತರಹದ ಸೌಕರ್ಯ ಕಲ್ಪಿಸಿದರೆ ಏನಾಗುವುದು? ಕೊಡಿ ಬಿದ್ದ ಕೆರೆಯಂತೆ ವಲಸೆ ಹರಿದು ಬರದೇ ? ಇವತ್ತು ನಮ್ಮೂರಿನ ಎಲ್ಲ ವ್ಯವಸ್ಥೆಗಳನ್ನು ಹಿಂದಿಯಲ್ಲಿ ಕಲ್ಪಿಸುತ್ತಾ ಹೋದರೆ, ಮೊದಲೇ ಜನ ಸಂಖ್ಯಾ ಸ್ಪೋಟದಿಂದ ನರಳುತ್ತಿರುವ ಹಿಂದೀ ಭಾಷಿಕ ಪ್ರದೇಶಗಳ ಜನರು ಕಡಿಮೆ ಜನದಟ್ಟಣೆಯ ಕರ್ನಾಟಕದಂತಹ ಊರುಗಳಿಗೆ ದಂಡಿಯಾಗಿ ವಲಸೆ ಬರುವುದಿಲ್ಲವೇ? ಅಂತಹದೊಂದು ವಲಸೆಯಿಂದ ಸ್ಥಳೀಯ ನುಡಿ, ಸಂಸ್ಕೃತಿ, ಆಚರಣೆ, ಸ್ಥಳೀಯತೆ ಎಲ್ಲವು ಒತ್ತಡಕ್ಕೊಳಗಾಗಿ ಉಳಿವಿಗಾಗಿ ಒದ್ದಾಡುವ ಸ್ಥಿತಿ ಹುಟ್ಟುವುದಿಲ್ಲವೇ? ಆಡಳಿತದ ಎಲ್ಲ ಹಂತದಲ್ಲಿ ಹೀಗೆ ಇನ್ನೊಂದು ನುಡಿಗೆ ಜಾಗ ಕೊಡುತ್ತ ಹೋದರೆ ನಮ್ಮ ನಾಡಿನಲ್ಲಿ ನಾಳೆ ದಿನ ಕನ್ನಡದ, ಕನ್ನಡಿಗರ ಸಾರ್ವಭೌಮತ್ವ ಉಳಿದೀತೇ?

ಯಾವ ಆಧಾರದ ಮೇಲೆ ಹಿಂದಿ ಹೇರಿಕೆಯ ಈ ಭಾಷಾ ನೀತಿ ರೂಪಿಸಿದ್ದೀರಾ ಅನ್ನುವ ಪ್ರಶ್ನೆಗೆ ಉತ್ತರ ಕೊಡಲು ತಡಕಾಡಿ ಕೊನೆಯಲ್ಲಿ ಮೆಟ್ರೋ ಬೋರ್ಡಿನ ನಿರ್ಣಯದಂತೆ ಅನ್ನುವ ಉತ್ತರವನ್ನು ಮೆಟ್ರೋ ಸಂಸ್ಥೆ ಕೊಟ್ಟಿದೆ. ರಾಜ್ಯ ಸರ್ಕಾರದ ಭಾಷಾ ನೀತಿಯನ್ವಯ ಕೆಲಸ ಮಾಡಬೇಕಾದ ಮೆಟ್ರೋ ಸಂಸ್ಥೆ ರಾಜ್ಯದ ಭಾಷಾ ನೀತಿಯನ್ನು ಗಾಳಿಗೆ ತೂರಿ ಸಂಸ್ಥೆಯ ಕೆಲ ಅಧಿಕಾರಿಗಳ ವೈಯಕ್ತಿಕ ಇಷ್ಟಾನಿಷ್ಟದ ಆಧಾರದ ಮೇಲೆ ಭಾಷಾ ನೀತಿ ರೂಪಿಸಿ ಮುಂದುವರೆಯುತ್ತಿರುವುದು ಬೆಂಗಳೂರಿನಲ್ಲಿ ಕರ್ನಾಟಕದ ಸರ್ಕಾರದ, ಕನ್ನಡಿಗರ ಸಾರ್ವಭೌಮತ್ವವನ್ನೇ ಆಡಿಕೊಳ್ಳುತ್ತಿರುವಂತಿದೆ. ಇದು ಬದಲಾಗಬೇಕು. ಬೆಂಗಳೂರಿನಲ್ಲಿ ಕನ್ನಡದ ಸಾರ್ವಭೌಮತ್ವಕ್ಕೆ ಧಕ್ಕೆ ತರುವಂತಹ ಯಾವ ನೀತಿಯನ್ನು ಒಪ್ಪಲಾಗದು. ಈ ಹೇರಿಕೆಯನ್ನು ವಿರೋಧಿಸಿ ಕಳೆದ ನಾಲ್ಕು ವರ್ಷಗಳಿಂದ ನಡೆಯುತ್ತಿರುವ ಅಭಿಯಾನದ ಎಲ್ಲ ಚಟುವಟಿಕೆಗಳನ್ನು ಒಂದೇ ವೇದಿಕೆಯಡಿ ತರುವ ಪ್ರಯತ್ನವಾಗಿ ಈ ತಾಣವನ್ನು ರೂಪಿಸಲಾಗಿದೆ. ಎಲ್ಲ ಸಮಾನ ಮನಸ್ಕ ಕನ್ನಡಿಗರು ಕೈ ಜೋಡಿಸಿ ಬದಲಾವಣೆಯ ಕೆಲಸಕ್ಕೆ ಕೈ ಜೋಡಿಸಬೇಕೆಂದು ಕೇಳಿಕೊಳ್ಳುತ್ತೇವೆ.

Advertisements
Advertisements